ಮಂಡ್ಯ: ಕಳೆದ ನಾಲ್ಕು ತಿಂಗಳ ಹಿಂದೆ ಮಹಿಳೆಯನ್ನು ಕೊಂದು, ದೇಹವನ್ನು 14 ಭಾಗಗಳಾಗಿ ತುಂಡರಿಸಿ ಹೇಮಾವತಿ ನದಿಗೆ ಎಸೆದು ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದ್ದ ಪ್ರಕರಣ ಭೇದಿಸುವಲ್ಲಿ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಆದ್ರೆ ಅದ್ಯಾಕೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ, ಅದ್ಯಾಕೆ ಈ ರೀತಿ ಕೊಲೆಗೈದರು, ಈ ಕೃತ್ಯ ಮಾಡಿದವರಾರು ಅಂತೀರಾ ಈ ಸ್ಟೋರಿ ನೋಡಿ..
ಹೌದು..! 2020ರ ನವೆಂಬರ್ 17 ರಂದು ಸಕ್ಕರೆ ನಾಡಿನ ಕೆ.ಆರ್. ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಾವತಿ ಕಾಲುವೆಯಲ್ಲಿ ಕೈ-ಕಾಲು, ತಲೆ ಇಲ್ಲದ ಮಹಿಳೆಯ ದೇಹ ಪತ್ತೆಯಾಗಿತ್ತು. ಇದನ್ನು ಕಂಡ ಸ್ಥಳೀಯರಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು.
ಈ ವೇಳೆ ಮಂಡ್ಯ ಪೊಲೀಸರಿಗೆ ಈ ಪ್ರಕರಣ ನಿದ್ದೆಗೆಡುವಂತೆ ಮಾಡಿತ್ತು. ಈ ಶವ ನೀರಿನಲ್ಲಿ ಇದ್ದ ಕಾರಣ ಗುರುತಿಸಲು ಸ್ಪಷ್ಟವಾಗಿ ಆಗುತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ತಲೆ ನೋವು ಉಂಟಾಗಿತ್ತು.
ಇದಾದ ಬಳಿಕ ಮಂಡ್ಯ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿತ್ತು. ಈ ಪ್ರಕರಣ ಜರುಗಿ ತಿಂಗಳುಗಳು ಉರುಳುತ್ತಿದ್ದರು ಸಹ ಪ್ರಕರಣದ ಬಗ್ಗೆ ಸ್ವಲ್ಪವೂ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರಿಗೆ ಮತ್ತಷ್ಟು ಒತ್ತಡ ಹೆಚ್ಚಾಗುತ್ತಾ ಹೋಯಿತು.
ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಸೆರೆ ಈ ನಡುವೆ ಮಾರ್ಚ್ 2ನೇ ತಾರೀಖು ಮೂಲತಃ ಮಂಡ್ಯದವರೇ ಆದ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಗೌರಿ ಶಂಕರ್ ಹಾಗೂ ಕುಮಾರಿ ದಂಪತಿ ತಮ್ಮ ಮಗಳು ಫೋನ್ ಮಾಡದಿರುವುದರಿಂದ ಅನುಮಾನಗೊಂಡು ಪಾಂಡವಪುರ ತಾಲ್ಲೂಕಿನ ದೇಶವಳ್ಳಿ ಗ್ರಾಮದ ತನ್ನ ಅಳಿಯನ ಮನೆಗೆ ಬಂದು ನೋಡಿದ್ರು. ಆದ್ರೆ ಮಗಳು ಇಲ್ಲದಿರುವುದನ್ನು ನೋಡಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ವೇಳೆ ಅನುಮಾನಗೊಂಡ ಪೊಲೀಸರು ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿ, ದೂರು ನೀಡಲು ಬಂದಿದ್ದ ದಂಪತಿಗಳನ್ನೂ ಕಳುಹಿಸಿಕೊಟ್ಟಿದರು. ಮೃತ ದೇಹದ ಕೈ ಮೇಲಿದ್ದ ಮೀನಿನ ಗುರುತಿನಿಂದಾಗಿ ಆಕೆಯೇ ತಮ್ಮ 30 ವರ್ಷದ ಮಗಳು ಆಶಾ ಎಂದು ಗುರುತಿಸಿದರು. ಇತ್ತ ಮೃತ ಮಹಿಳೆಯ ಗುರುತು ಪತ್ತೆಯಾಗುತ್ತಿದ್ದಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ ಪೊಲೀಸರು ಆಕೆಯ ಗಂಡ ರಂಗಪ್ಪನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ಭಾವ ಚಂದ್ರ ಅಲಿಯಾಸ್ ರಾಮಚಂದ್ರನೊಂದಿಗೆ ಸೇರಿ ತಾನೇ ಕೊಲೆಗೈದು ಹೇಮಾವತಿ ನದಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಅಂದ ಹಾಗೆ ಮೃತ ಆಶಾಳನ್ನ 9 ವರ್ಷದ ಹಿಂದೆ ರಂಗಪ್ಪ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ ಆಶಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು, ಅದಕ್ಕೆ ನಾವು ದೇಶಹಳ್ಳಿಯ ಹೊರಗಡೆ ಕರೆದುಕೊಂಡು ಹೋಗಿ ಕಬ್ಬು ಕಡಿಯುವ ಮಚ್ಚಿನಿಂದ ಕೊಲೆ ಮಾಡಿದೆ. ಆಕೆ ದೆವ್ವವಾಗಿ ನಮ್ಮನ್ನ ಕಾಡಬಹುದು ಎಂದು ಆಕೆಯನ್ನು ತುಂಡು ತುಂಡಾಗಿ ಕತ್ತರಿಸಿ ನಾಲೆಗೆ ಎಸೆದೆವು ಎಂದು ಬಾಯಿ ಬಿಟ್ಟಿದ್ದಾರೆ.
ಆದ್ರೆ ಆಶಾಳ ಸಂಬಂಧಿಕರು ರಂಗಪ್ಪ ರಾಮಚಂದ್ರನ ಮಗಳನ್ನು ಮದುವೆಯಾಗಬೇಕು ಎಂದುಕೊಂಡಿದ್ದ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳವಾಗುತ್ತಿತ್ತು, ಈ ವೇಳೆ ನಿನ್ನ ಕತ್ತರಿಸಿಯಾದರೂ ಮದುವೆಯಾಗುತ್ತೇನೆ ಎಂದು ಆಶಾಳಿಗೆ ಬೆದರಿಕೆ ಹಾಕುತ್ತಿದ್ದ, ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯ ಜನರನ್ನೇ ಬೆಚ್ಚಿಬಿಳಿಸಿದ್ದ ಈ ಘಟನೆಯ ನಾಲ್ಕು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮಗಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರಿಡುತ್ತಿದ್ದಾರೆ. ಅತ್ತ ಏನೂ ತಿಳಿಯದ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು ಮೂರು ಮಕ್ಕಳು ತಬ್ಬಲಿಗಳಾಗಿರುವುದು ದುರಂತವೇ ಸರಿ.