ಕರ್ನಾಟಕ

karnataka

ETV Bharat / state

ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ, ರೈತರ ಹಿತ ಕಾಯುವುದಕ್ಕೆ ಶತಸಿದ್ಧ: ಸಿಎಂ ಸಿದ್ದರಾಮಯ್ಯ - ​ ETV Bharat Karnataka

ಮಂಡ್ಯದಲ್ಲಿ ಕಾವೇರಿ ನೀರಿನ ವಿಚಾರವಾಗಿ ಕಳೆದ 56 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 31, 2023, 3:47 PM IST

ಮಂಡ್ಯ:ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂಥದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯಲು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟಗಳು ಕಳೆದ 56 ದಿನಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಭೇಟಿ ಕೊಟ್ಟ ಸಿಎಂ, ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದರು.‌

ನಾವು ಈ ವರ್ಷ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಮಳೆ ಪೂರ್ತಿ ಕೈಕೊಟ್ಟಿದೆ. ಇದರಿಂದ ಜಲಾಶಯಗಳು ತುಂಬದೆ ಸಂಕಷ್ಟದ ವರ್ಷದಲ್ಲಿ ಇದ್ದೇವೆ. ನಾವು ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎನ್ನುವ ಆದೇಶ ಹೊರಬಿದ್ದಿದೆ. ಪ್ರತಿ ತಿಂಗಳು ಇಷ್ಟಿಷ್ಟು ನೀರು ಬಿಡಬೇಕು ಎನ್ನುವ ಆದೇಶವಿದೆ. ನಾವು ಕಾವೇರಿ ಪ್ರಾಧಿಕಾರ ಮತ್ತು ಸಮಿತಿ ಎದುರು, ನೀರಿಲ್ಲ, ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ವಾದವನ್ನು ಬಲವಾಗಿ ಮಂಡಿಸಿದ್ದೇವೆ. ಆದರೂ ಮೊದಲು 5000 ಕ್ಯೂಸೆಕ್ ನೀರು ಬಿಡಲು ಹೇಳಿದರು. ಬಳಿಕ 3,000 ಕ್ಯೂಸೆಕ್ ನೀರು ಬಿಡಲು ಆದೇಶ ಬಂತು. ಅದಕ್ಕೂ ನಾವು ಒಪ್ಪಲಿಲ್ಲ. ನಿನ್ನೆ 2,600 ಕ್ಯೂಸೆಕ್ ನೀರು ಬಿಡುವಂತೆ ಆದೇಶವಾಗಿದೆ.

ಇದನ್ನೂ ಓದಿ:ಬರದ ನೋವು ಬಳಸಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವ ಬಿಜೆಪಿಯನ್ನು ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ, ಜಾಗ್ರತೆಯಿಂದಿರಿ: ಸಿಎಂ

ಆದರೆ ನಾವು ಕುಡಿಯುವ ನೀರು ಮತ್ತು ಬೆಳೆ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇವೆ. ಮುಂಗಾರು ಬೆಳೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತೇವೆ. ನಾನೂ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ. ನಾವೂ ಅಚ್ಚುಕಟ್ಟು ಪ್ರದೇಶದಲ್ಲೇ ಇದ್ದೇವೆ. ಆದ್ದರಿಂದ ರೈತರ ಸಂಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಿಮ್ಮ ಹಿತ ಕಾಯಲು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ ಸಿದ್ದರಾಮಯ್ಯ ನುಡಿದರು.

ರೈತರ ಹಿತ ಕಾಯಲು ಗಂಭೀರವಾದ, ಪ್ರಾಯೋಗಿಕವಾದ ಕ್ರಮ ಕೈಗೊಳ್ಳುತ್ತೇವೆ. ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ನಾವು ನಿಮ್ಮ ಪರವಾಗಿ ಇರುವವರು. ಅನುಮಾನ ಬೇಡವೇ ಬೇಡ ಎಂದು ಭರವಸೆಯ ಮಾತುಗಳನ್ನು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:ಇಂದು ಮಂಡ್ಯಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಕಾವೇರಿ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆ

ABOUT THE AUTHOR

...view details