ಮಂಡ್ಯ:ಕಳೆದ ಮೂರು ದಿನಗಳ ಹಿಂದೆ ಹಾದಿತಪ್ಪಿ ಹಾಸನ ಜಿಲ್ಲೆಯ ಸಕಲೇಶಪುರ ಅರಣ್ಯ ಪ್ರದೇಶದಿಂದ ಚನ್ನರಾಯಪಟ್ಟಣ ಮಾರ್ಗವಾಗಿ ಎರಡು ಕಾಡಾನೆಗಳು ಜಿಲ್ಲೆಯ ಹಲವೆಡೆ ಸಂಚರಿಸುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
ನಾಗಮಂಗಲ ತಾಲೂಕಿನ ಕಸಬಾ ಹೋಬಳಿಯ ಪಡುವಲಪಟ್ಟಣ ಸಮೀಪದ ಬಸವನಕಲ್ಲು ಬೆಟ್ಟದ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಆನೆಗಳು ಬೀಡುಬಿಟ್ಟಿದ್ದು, ಸ್ಥಳೀಯ ಜಮೀನಿನಲ್ಲಿ ಕಬ್ಬಿನ ಬೆಳೆಯನ್ನು ತಿಂದು ಹೊರಬರುತ್ತಿರುವ ಕಾಡಾನೆಗಳನ್ನು ಕಂಡು ಜನ ಭಯಭೀತರಾಗಿದ್ದಾರೆ.
ಚನ್ನರಾಯಪಟ್ಟಣ ಮಾರ್ಗವಾಗಿ ತಾಲೂಕಿಗೆ ಪ್ರವೇಶಿಸಿದ ಈ ಎರಡು ಕಾಡಾನೆಗಳು ಜ.1ರಂದು ಪಡುವಲಪಟ್ಟಣ ಸಮೀಪದಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶವಿರುವ ಮೀಸಲು ಅರಣ್ಯದಲ್ಲಿ ಬೀಡುಬಿಟ್ಟಿದ್ದು, ರಾತ್ರಿ ವೇಳೆಯಲ್ಲಿ ತಮ್ಮ ಸಂಚಾರ ಆರಂಭಿಸಿವೆ. ಈ ಆನೆಗಳು ಜ.2 ರಂದು ಮದ್ದೂರು ತಾಲೂಕಿನ ಕೋಣಸಾಲೆ ಚೊಟ್ಟನಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿಂದ ಬಂದ ಹಾದಿಯಲ್ಲಿಯೇ ಹಿಂದಿರುಗಿದ ಎರಡು ಕಾಡಾನೆಗಳು, ಜ.3 ರಂದು ಮದ್ದೂರು ತಾಲೂಕಿನ ಕೌಡ್ಲೆ ಸಮೀಪದ ಬೋಳಾರೆ ಕೆರೆಯಲ್ಲಿ ಬೀಡುಬಿಟ್ಟಿದ್ದವು. ಈ ವೇಳೆ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರೈತರೊಬ್ಬರ ಕಬ್ಬಿನ ಬೆಳೆಯನ್ನು ಹಾನಿ ಮಾಡಿವೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಮಂಡ್ಯಕ್ಕೆ ಲಗ್ಗೆ ಇಟ್ಟ ಆನೆಗಳು ಮಂಡ್ಯದಲ್ಲಿ ಬೀಡು ಬಿಟ್ಟ ಕಾಡಾನೆಗಳು ಸುರಕ್ಷಿತವಾಗಿ ಆನೆಗಳನ್ನು ಕಾಡಿಗಟ್ಟುತ್ತೇವೆ: ಹಾಸನ ಜಿಲ್ಲೆಯಿಂದ ಹಾದಿತಪ್ಪಿ ಬಂದಿರುವ ಎರಡು ಕಾಡಾನೆಗಳನ್ನು ಸುರಕ್ಷಿತವಾಗಿ ಪುನಃ ಅದೇ ದಾರಿಯಲ್ಲಿ ಕಾಡಿಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಅಗತ್ಯ ಕ್ರಮವಹಿಸಲಾಗಿದ್ದು, ಜನರಿಂದ ಗಾಬರಿಗೊಳ್ಳುವ ಕಾಡಾನೆಗಳು ಹಗಲು ವೇಳೆಯಲ್ಲಿ ಅರಣ್ಯ ಪ್ರದೇಶ ಅಥವಾ ದಟ್ಟವಾದ ಗಿಡಮರಗಳ ನಡುವೆ ಬೀಡುಬಿಟ್ಟು ರಾತ್ರಿ ವೇಳೆಯಲ್ಲಿ ತಮ್ಮ ಸಂಚಾರ ಆರಂಭಿಸುತ್ತವೆ. ಮಂಗಳವಾರ ಬೆಳಗಿನ ವೇಳೆಗೆ ತಾಲೂಕಿನ ಗಡಿಯಿಂದ ನಿರ್ಗಮಿಸುವ ಸಾಧ್ಯತೆಯಿದೆ ಎಂದು ವಲಯ ಅರಣ್ಯಾಕಾರಿ ಕೆ.ಬಿ. ಶಿವರಾಂ ತಿಳಿಸಿದ್ದಾರೆ.
ಇದನ್ನೂ ಓದಿ:ಝೈಕೋವ್-ಡಿ ಲಸಿಕೆ 3 ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮತಿ