ಕರ್ನಾಟಕ

karnataka

ETV Bharat / state

ಮಂಡ್ಯ: ಒಂಟಿ ಸಲಗ ದಾಳಿ, ರೈತ ಮಹಿಳೆ ಸ್ಥಳದಲ್ಲೇ ಸಾವು - ಈಟಿವಿ ಭಾರತ ಕನ್ನಡ

Wild Elephant attack in Mandya: ಒಂಟಿ ಸಲಗ ದಾಳಿಯಿಂದ ಮಹಿಳೆ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ಇಂದು ಮುಂಜಾನೆ ನಡೆದಿದೆ.

wild elephant attack on women in mandya
ಮಂಡ್ಯ: ಒಂಟಿ ಸಲಗ ದಾಳಿ, ರೈತ ಮಹಿಳೆ ಸ್ಥಳದಲ್ಲೇ ಸಾವು

By ETV Bharat Karnataka Team

Published : Nov 19, 2023, 11:42 AM IST

Updated : Nov 19, 2023, 7:18 PM IST

ಒಂಟಿ ಸಲಗ ದಾಳಿಯಿಂದ ಮಹಿಳೆ ಸಾವು

ಮಂಡ್ಯ: ತಾಲೂಕಿನ ಲಾಳನಕೆರೆ ಗ್ರಾಮದ ಹೊರ ವಲಯದಲ್ಲಿ ಭಾನುವಾರ ಮುಂಜಾನೆ ಕೆಲಸಕ್ಕೆಂದು ಜಮೀನಿಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಲಾಳನಕೆರೆ ಗ್ರಾಮದ ಸಾಕಮ್ಮ(55) ಮೃತರು. ನಾಲ್ಕು ಮಂದಿ ಮಹಿಳೆಯರು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಜಮೀನು ಕಡೆಗೆ ತೆರಳಿದ್ದರು. ಪಕ್ಕದಲ್ಲೇ ಇದ್ದ ಕಬ್ಬಿನ ಗದ್ದೆಯಿಂದ ಏಕಾಏಕಿ ಬಂದ ಒಂಟಿ ಸಲಗ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಒಂಟಿ ಸಲಗವನ್ನು ಕಾಡಿಗಟ್ಟಲು ಕ್ರಮ ಕೈಗೊಂಡಿದ್ದಾರೆ. ಒಂಟಿ ಸಲಗವಾಗಿರುವುದರಿಂದ ಯಾವ ಸಮಯದಲ್ಲಾದರೂ ದಾಳಿ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರೈತರಿಗೆ ಜಾಗ್ರತೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ. ಅಲ್ಲದೆ. ಮೃತ ಸಾಕಮ್ಮ ಕುಟುಂಬಕ್ಕೆ ಪರಿಹಾರವನ್ನೂ ನೀಡಲಾಗುವುದೆಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಪೊಲೀಸ್​ ವರಿಷ್ಠಾಧಿಕಾರಿ ಎನ್ ಯತೀಶ್ ಗ್ರಾಮಕ್ಕೆ ಆಗಮಿಸಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಂಡ್ಯ ತಾಲೂಕಿನ ಲಾಳನಕೆರೆ, ಪಿ‌.ಹಳ್ಳಿ, ಮೊತ್ತಹಳ್ಳಿ ಗ್ರಾಮಗಳ ಸುತ್ತಮುತ್ತ ಒಂಟಿ ಸಲಗ ಓಡಾಡುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

ಪ್ರತ್ಯಕ್ಷದರ್ಶಿ ಕಾಳಮ್ಮ ಮಾತನಾಡಿ, ಇಂದು ಬೆಳಗ್ಗೆ ನಾವು ಜಮೀನಿನ ಕೆಲಸಕ್ಕೆಂದು ಹೋಗುತ್ತಿದ್ದೆವು. ಈ ವೇಳೆ ಕಾಡಾನೆ ಕಬ್ಬಿನ ಗದ್ದೆಯಿಂದ ಕೂಗುತ್ತ ಬರುತ್ತಿರುವುದನ್ನು ಕಂಡು ಬೇಲಿ ದಾಟಿ ತರಕಾರಿ ಹೊಲಕ್ಕೆ ನುಗ್ಗಿದ್ದೆವು. ಸಾಕಮ್ಮ ಸೀಮೆ ಹುಲ್ಲಿನ ಹೊಲಕ್ಕೆ ಹೋದರು. ಆಗ ಅವರ ಆನೆ ದಾಳಿ ಮಾಡಿದೆ ಎಂದು ಹೇಳಿದರು.

ಮಂಡ್ಯ ಉಪವಿಭಾಗದ ಎಸಿಎಫ್ ಮಹದೇವಸ್ವಾಮಿ ಮಾತನಾಡಿ, ಇಂದು ಬೆಳಗ್ಗೆ ಸುಮಾರು ಏಳೂವರೆ ಎಂಟು ಗಂಟೆ ಸಮಯದಲ್ಲಿ ಲಾಳನಕೆರೆ ಗ್ರಾಮದಲ್ಲಿ ಆನೆ ಪ್ರತ್ಯಕ್ಷವಾಗಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದೆ. ಅದು ಒಂಟಿ ಸಲಗವಾಗಿದೆ. ಸ್ಥಳಕ್ಕೆ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್​ ವರಿಷ್ಠಾಧಿಕಾರಿ, ಅರಣ್ಯಾಧಿಕಾರಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಆಗಮಿಸಿದ್ದೇವೆ. ಆನೆಯನ್ನು ಕಾಡಿಗಟ್ಟಲು ಕ್ರಮ ತೆಗೆದುಕೊಂಡಿದ್ದೇವೆ, ಮೃತ ಸಾಕಮ್ಮ ಅವರ ಕುಟುಂಬ ಪರಿಹಾರ ಕೊಡುವ ಕೆಲಸ ಆಗುತ್ತಿದೆ. ಸರ್ಕಾರದ 15 ಲಕ್ಷ ಮತ್ತು ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿ ಮಾಶಾಸನ ಕೊಡಲು ಎಲ್ಲಾ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಗ್ರಾಮಕ್ಕೆ ಆಗಮಿಸಿ ಮೃತಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇವೆ. ಮೃತಳ ಕುಟುಂಸ್ಥರಿಗೆ ಪರಿಹಾರ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಪದೇ ಪದೆ ಈ ಭಾಗದಲ್ಲಿ ಆನೆ ದಾಳಿ ನಡೆಯುತ್ತಿದ್ದೆ, ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನಾವು, ಅರಣ್ಯ ಇಲಾಖೆಯವರು ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಹೆಚ್.​ಡಿ.ಕೋಟೆಯಲ್ಲಿ ರೈತನ ಮೇಲೆ ಆನೆ ದಾಳಿ: ಗಂಭೀರ ಗಾಯ

Last Updated : Nov 19, 2023, 7:18 PM IST

ABOUT THE AUTHOR

...view details