ಮಂಡ್ಯ :ಬಿಜೆಪಿ ಸರ್ಕಾರ ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸದಿದ್ದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರಲಿದ್ದು, ನಾವೇ ನಡೆಸುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ನಡೆಯುತ್ತಿರುವ 28ನೇ ದಿನದ ಮೈಶುಗರ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಾವೇ ಒಂದು ತಿಂಗಳಲ್ಲಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ರೈತಪರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಮೈಶುಗರ್ ಕಾರ್ಖಾನೆ ಸ್ವಾತಂತ್ರ್ಯಪೂರ್ವದಲ್ಲಿಯೇ ಆರಂಭವಾಗಿತ್ತು :ಮೈಶುಗರ್ ಕಾರ್ಖಾನೆ ಸ್ವಾತಂತ್ರ್ಯಪೂರ್ವ ಅಂದ್ರೇ 1933ರಲ್ಲಿ ಆರಂಭವಾಗಿದೆ. ಕಾರ್ಖಾನೆ ಹಾಗೂ ಮಂಡ್ಯ ಜಿಲ್ಲೆಯ ಜನರ ನಡುವೆ ಅವಿನಾಭಾವ ಸಂಬಂಧವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರಿಗೆ ಅನುಕೂಲವಾಗಲೆಂದು ಕಾರ್ಖಾನೆ ಆರಂಭಿಸಿದ್ದರು. ಇದೊಂದು ಜಿಲ್ಲೆಗೆ ಪ್ರತಿಷ್ಠಿತ ಕಂಪನಿಯಾಗಿದೆ. ಲಾಭದಾಯಕವಾಗಿ ನಡೆದಿದ್ದು, ನಷ್ಟಕ್ಕೆ ಸರ್ಕಾರವೇ ಹೊಣೆಯಾಗಿದೆ. ಆದರೆ, ಯಾವುದೇ ಕಾರಣಕ್ಕೂ ರೈತರು ನಷ್ಟವಾಗುವುದಕ್ಕೆ ಕಾರಣರಲ್ಲ ಎಂದರು.
ರಾಜ್ಯದಲ್ಲಿ ಸಾಕಷ್ಟು ಕಾರ್ಖಾನೆಗಳು ನಷ್ಟದಲ್ಲಿವೆ :ರಾಜ್ಯದಲ್ಲಿ ಸಾಕಷ್ಟು ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ಮಾರಾಟ ಮಾಡಲು ಸಾಧ್ಯವಿಲ್ಲ. ಎಲ್ಲವನ್ನು ಪುನಶ್ಚೇತನ ಮಾಡಲು ಸರ್ಕಾರಕ್ಕೆ ಸಾಧ್ಯವಿದೆ. ಕಾರ್ಖಾನೆಯೂ ಯಾಕೆ ನಷ್ಟ ಅನುಭವಿಸಿದೆ. ಏನಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ಚಿಕಿತ್ಸೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಸಲಾಗಿದೆ. ಇದಕ್ಕೆ ಸರ್ಕಾರವೇ ಉತ್ತರ ಕೊಡಬೇಕು ಎಂದರು.
ಅಸೆಂಬ್ಲಿಯಲ್ಲಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ :ವಿಧಾನಸಭೆಯಲ್ಲಿ ಶಾಸಕರಾದ ಅನ್ನದಾನಿ, ಸುರೇಶ್‌ಗೌಡ, ತಮ್ಮಣ್ಣ ಮಾತನಾಡಿದ್ದಾರೆ. ಅದಕ್ಕೆ ಸ್ಪೀಕರ್ ಬಳಿ ಅರ್ಧಗಂಟೆ ಸಮಯಾವಕಾಶ ಕೇಳಿದ್ದೆ. ಆದರೆ, ಇದರ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಆದರೂ ಸರ್ಕಾರ ಹುಚ್ಚು ಸಾಹಸಕ್ಕೆ ಕೈಹಾಕುವುದನ್ನು ನಿಲ್ಲಿಸಬೇಕು.