ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕನ್ನಡಿಗರ ಪರ ಬರಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಡ್ಯದಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಿದರು.
ನಗರದ ಸಂಜಯ ವೃತ್ತದಿಂದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಉರುಳು ಸೇವೆ ಆರಂಭಿಸಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ಯೋಗೇಶ್ ಗೌಡ, ಬೆಂಕಿ ಶ್ರೀಧರ್, ನಾಗಲಕ್ಷ್ಮಿ, ರೋಸಿ, ನಿರ್ಮಲ, ತಸ್ನಿಯ ಬಾನು, ಸೋಮಶೇಖರ್, ಗೋವಿಂದನಾಯಕ್, ಜಯಸಿಂಹ, ಯೇಸು, ರಂಜಿತ್ ಗೌಡ, ಕೃಷ್ಣೇಗೌಡ, ದೇವರಾಜ್ ಉರುಳು ಸೇವೆ ಮಾಡಿದರು. ಸುಮಾರು ಎರಡು ತಾಸುಗಳ ಕಾಲ ಸರ್ಎಂವಿ ಪ್ರತಿಮೆವರೆಗೆ ಉರುಳುವ ಮೂಲಕ ಕಾವೇರಿ ವಿಚಾರದಲ್ಲಿ ನ್ಯಾಯಕ್ಕೆ ಒತ್ತಾಯಿಸಿದ ಪ್ರತಿಭಟನಾಕಾರರು, ಬೇಕೇ ಬೇಕು ನ್ಯಾಯ ಬೇಕು, ಕಾವೇರಿ ನಮ್ಮದು, ತಕ್ಷಣ ನೀರು ನಿಲ್ಲಿಸಿ, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ದೊರಕಲಿ ಎಂದು ಘೋಷಣೆ ಕೂಗಿದರು.
ಮಂಡ್ಯದಲ್ಲಿ ಚಡ್ಡಿ ಮೆರವಣಿಗೆ: ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ಚಡ್ಡಿ ಮೆರವಣಿಗೆ ನಡೆಸಿದರು. ನಗರದ ಸಂಜಯ ವೃತ್ತದಲ್ಲಿ ಪಟಾಪಟಿ ಚಡ್ಡಿ ದರಿಸಿ ಖಾಲಿ ಬಿಂದಿಗೆ ಪ್ರದರ್ಶಿಸಿ, ಮೆರವಣಿಗೆ ಹೊರಟ ಜಿಲ್ಲೆಯ ಶಾಸಕ – ಸಂಸದರ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಕಾವೇರಿ ಹೋರಾಟ ಬೆಂಬಲಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ
ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾವೇರಿ ಕಣಿವೆ ಜಿಲ್ಲೆಗಳ ರೈತರ ಹಿತ ಕಾಪಾಡಲು ಒತ್ತಾಯಿಸಿದರು.