ಮಂಡ್ಯ :ಜಿಲ್ಲಾ ಹಾಲು ಒಕ್ಕೂಟ(ಮನ್ಮುಲ್)ದಲ್ಲಿ ನಡೆದಿರುವ ಹಾಲಿಗೆ ನೀರಿನ ಮಿಶ್ರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅಡ್ಡಿಯಾಗಿದ್ದಾರೆ ಎನ್ನುವ ಅನುಮಾನ ಪ್ರಾರಂಭವಾಗಿದೆ. ಇದಕ್ಕೆ ಪೂರಕವೆಂಬಂತೆ ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಹಾಗೂ ನಾಗಮಂಗಲದ ಸ್ಥಳೀಯ ಮುಖಂಡ ಜವರೇಗೌಡ ಎಂಬುವರು ಮೊಬೈಲ್‌ನಲ್ಲಿ ಚರ್ಚಿಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ವೈರಲ್ ಆಡಿಯೋದಲ್ಲಿ ನಡೆದ ಸಂಭಾಷಣೆಯೇನು?
7 ನಿಮಿಷ 18 ಸೆಕಂಡ್ ಅವಧಿ ಇರುವ ಚಲುವರಾಯಸ್ವಾಮಿ ಆಡಿಯೋ ಜಿಲ್ಲಾದ್ಯಂತ ಸಂಚಲನ ಸೃಷ್ಟಿಸಿದೆ. ಹಗರಣದ ತನಿಖೆ ನಡೆಸಲು ಹೆಚ್‌ಡಿಕೆ ಬಿಡುತ್ತಿಲ್ಲ. ಇದಕ್ಕೆ ದೇವೇಗೌಡರು ಬೆಂಬಲಿಸುತ್ತಿದ್ದಾರೆ ಎನ್ನುವ ಮಾತು ಆಡಿಯೋದಲ್ಲಿದೆ. ಇದಲ್ಲದೇ ಹಾಲಿ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸುತ್ತಿದ್ದಾರೆ ಎನ್ನುವ ವಿಷಯವೂ ಬಹಿರಂಗವಾಗಿದೆ.
ರಾಜಕೀಯದಾಟಕ್ಕೆ ಮನ್ಮುಲ್ನ ಹಾಲು ಹಗರಣ ದಾಳವಾಗಿದೆ ಎನ್ನುವುದು ಆಡಿಯೋದೊಂದಿಗೆ ಸ್ಪಷ್ಟವಾಗುತ್ತಿದೆ. ಜತೆಗೆ ಈ ಆಡಿಯೋದಲ್ಲಿ ಮಾತನಾಡಿರುವುದು ಎನ್.ಚಲುವರಾಯಸ್ವಾಮಿಯೇ ಎನ್ನುವುದು ಕೂಡ ಖಚಿತವಾಗಬೇಕಿದೆ.