ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕೈಗೊಂಡಿರುವ ನಿರಂತರ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಸಮಿತಿ ಸದಸ್ಯರ ಜತೆಗೂಡಿದ ಹಲವು ಸಂಘಟನೆಗಳ ಕಾರ್ಯಕರ್ತರು ನೆರೆ ರಾಜ್ಯ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಜಾತ್ಯಾತೀತ ದಳದ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಧರಣಿಯಲ್ಲಿ ಪಾಲ್ಗೊಂಡು ಕಾವೇರಿ ಹೋರಾಟಕ್ಕೆ ನಿರಂತರ ಬೆಂಬಲ ನೀಡುವುದಾಗಿ ತಿಳಿಸಿದರು.
ಬೆಂಗಳೂರಿನ ಗೌಡತಿಯರ ಸೇನೆ, ಗೌಡರ ಯುವಸೇನೆ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗ ಪದವೀಧರರ ವೇದಿಕೆ ಕಾರ್ಯಕರ್ತರು ಕಾವೇರಿ ಹೋರಾಟ ಬೆಂಬಲಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸ ಸಂಶೋಧಕ ಡಾ. ತಲಕಾಡುಚಿಕ್ಕ ರಂಗೇಗೌಡ, ಸಾಹಿತಿ ಎಲ್ ಎನ್ ಮುಕುಂದರಾಜ್, ಟಿ ರೇಣುಕಾ ಭಕ್ತರಹಳ್ಳಿ, ಕೃಷ್ಣೆಗೌಡ, ಕೆ ಆರ್ ವೆಂಕಟೇಶ್ ಗೌಡ ನೇತೃತ್ವ ವಹಿಸಿದ್ದರು.
ಈದ್ ಮಿಲಾದ್ ಹಬ್ಬದ ದಿನವೂ ಮುಸ್ಲಿಂ ಸಮುದಾಯಎಸ್ ಡಿ ಪಿ ಐ ನೇತೃತ್ವದಲ್ಲಿ ಕಾವೇರಿ ಹೋರಾಟ ಬೆಂಬಲಿಸಿದರು. ಅಧ್ಯಕ್ಷ ಸಾದತ್, ಉಪಾಧ್ಯಕ್ಷ ಮುಕ್ತಿಯಾರ್, ಮುಬಾರಕ್ ಹುಸೇನ್, ಆಸ್ಕರ್ ಭಾಗವಹಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಾರ್ಯಕರ್ತರು ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ರೈತ ಹಿತರಕ್ಷಣಾ ಸಮಿತಿಯ ಹೋರಾಟ ಬೆಂಬಲಿಸಿದರು. ಕಾವೇರಿ ನಮ್ಮದು, ರಕ್ತ ಕೊಟ್ಟೆವು, ನೀರು ಬಿಡೆವು ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ, ಜಿಲ್ಲಾಧ್ಯಕ್ಷ ಹೇಮಂತ್, ಕುಮಾರ್ ನೇತೃತ್ವ ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಇಂಡುವಾಳು ಮತ್ತು ಸಿದ್ದಯ್ಯನ ಕೊಪ್ಪಲು ಗ್ರಾಮದ ರೈತರು ಟ್ರಾಕ್ಟರ್ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣಿ ಬೆಂಬಲಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ನೇತೃತ್ವ ವಹಿಸಿದ್ದರು.
ತಮಿಳುನಾಡಿನಿಂದ ದಿಕ್ಕು ತಪ್ಪಿಸುವ ಕೆಲಸ-ಡಾ ತಲಕಾಡು ಚಿಕ್ಕರಂಗೇಗೌಡ.. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ನಿರಂತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇತಿಹಾಸ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ತಿಳಿಸಿದರು.