ಮಂಡ್ಯ: ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ಬಿಗಿಭದ್ರತೆಯಲ್ಲಿ ಜಿಲ್ಲಾ ಖಜಾನೆಯಿಂದ ದೇವಸ್ಥಾನಕ್ಕೆ ವಜ್ರಖಚಿತ ಕಿರೀಟ ರವಾನೆಯಾಯಿತು. ಇಂದು ಬೆಳಗ್ಗೆ ನಗರದ ಜಿಲ್ಲಾ ಖಜಾನೆಯಲ್ಲಿದ್ದ ಚೆಲುವನಾರಾಯಣಸ್ವಾಮಿಯ ಆಭರಣಗಳನ್ನು ಡಿಸಿ ಹೆಚ್.ಎನ್. ಗೋಪಾಲಕೃಷ್ಣ ನೇತೃತ್ವದಲ್ಲಿ ತೆಗೆದು ವಿಶೇಷ ಪೂಜೆ ಸಲ್ಲಿಸಿ ನಂತರ ನಗರದ ಲಕ್ಷ್ಮೀಜನಾರ್ಧನಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.
ರಸ್ತೆಯುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಆಭರಣಕ್ಕೆ ನಮಿಸಲು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಮೂಲಕ ಸಂಜೆ 6 ಗಂಟೆಗೆ ಉತ್ಸವ ದೇವಸ್ಥಾನಕ್ಕೆ ತಲುಪಲಿದೆ. ಬಳಿಕ ರಾತ್ರಿ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳ ವರ್ಗಾವಣೆ ನಡೆಸಿ ಚೆಲುವನಾರಾಯಣ ಸ್ವಾಮಿಗೆ ತೊಡಿಸಿ ವೈರಮುಡಿ ಉತ್ಸವ ನಡೆಯಲಿದೆ. ಈಗಾಗಲೇ ಪೊಲೀಸ್ ಇಲಾಖೆ ಮೇಲುಕೋಟೆಯಲ್ಲಿ ಬಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 600ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಬಂದಂತಹ ಭಕ್ತರು ಸಹಕರಿಸಿ ಉತ್ಸವ ಕಣ್ತುಂಬಿಕೊಳ್ಳಲು ದೇವಸ್ಥಾನ ಮನವಿ ಮಾಡಿದೆ.