ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ವೈರಮುಡಿ ಹಾಗೂ ರಾಜಮುಡಿ ಧಾರಣೆಯಿಂದ ಕಂಗೊಳಿಸುತ್ತಿದ್ದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಮೇಲುಕೋಟೆಯ ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ವಿಜೃಂಭಣೆಯಿಂದ ನಡೆದ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಕೊರೊನಾ ಅಟ್ಟಹಾಸ ಹಿನ್ನೆಲೆ ಕಳೆದ ವರ್ಷ ವೈರಮುಡಿ ಉತ್ಸವವನ್ನ ರದ್ದು ಮಾಡಲಾಗಿತ್ತು. ಈ ಬಾರಿ ಸಾಂಪ್ರದಾಯಿಕ ಉತ್ಸವವನ್ನ ಸರಳವಾಗಿ ಆಚರಿಸೋಕೆ ಜಿಲ್ಲಾಡಳಿತ ನಿರ್ಧರಿಸಿತ್ತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದಂತೆ ನಡೆದ ವೈರಮುಡಿ ಉತ್ಸವವನ್ನ ನಿರೀಕ್ಷೆಗೂ ಮೀರಿದ ಭಕ್ತಗಣ ಕಣ್ತುಂಬಿಕೊಂಡಿತು. ಹೊರ ರಾಜ್ಯ, ಜಿಲ್ಲೆಯ ಜನರ ನಿರ್ಬಂಧದ ಹಿನ್ನೆಲೆ ಸ್ಥಳೀಯರು, ಅಧಿಕಾರಿಗಳು, ಸರ್ಕಾರಿ ನೌಕರರು, ರಾಜಕಾರಣಿಗಳು ಮತ್ತು ಸಹಚರರು ಹತ್ತಿರದಿಂದಲೇ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯನ್ನ ಕಂಡು ಪುನೀತರಾದರು.
ಸರ್ಕಾರ ಮತ್ತು ಜಿಲ್ಲಾಡಳಿತ, ಸರಳ ಹಾಗೂ ಸಾಂಪ್ರದಾಯಿಕ ವೈರಮುಡಿ ಉತ್ಸವ ಆಚರಿಸಿದ್ದನ್ನ ಸಮರ್ಥಿಸಿಕೊಂಡಿವೆ. ವೈರಮುಡಿ ಉತ್ಸವ ಹಿನ್ನೆಲೆ ಮೇಲುಕೋಟೆಯ ಬೆಟ್ಟದ ಯೋಗ ನರಸಿಂಹಸ್ವಾಮಿ ಹಾಗೂ ಚೆಲುವನಾರಾಯಣ ಸ್ವಾಮಿ ದೇಗುಲ ಮತ್ತು ರಾಜಬೀದಿಗಳು ವರ್ಣರಂಜಿತ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು.
ಭಕ್ತಿಯ ಪರಾಕಾಷ್ಠೆ ಮೆರೆದು ಬರ್ತಿದ್ದ ಭಕ್ತರು ವೈರಮುಡಿ ಧಾರಿತ ಚೆಲುವನಾರಾಯಣನನ್ನ ಕಂಡು ಗೋವಿಂದ ಗೋವಿಂದ ನಾಮ ಸ್ಮರಣೆ ಮೂಲಕ ಹರ್ಷ ವ್ಯಕ್ತಪಡಿಸಿದರು. ಮುಂದೆ ಕೊರೊನಾ ಆತಂಕ ಮರೆಯಾಗಲಿ. ಎಂದಿನಂತೆ ವಿಜೃಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯಲಿ ಎಂದು ಪ್ರಾರ್ಥಿಸಿದ್ರು.