ಮಂಡ್ಯ: ಮಂಡ್ಯದ ಚೀರನಹಳ್ಳಿ ಗ್ರಾಮದಲ್ಲಿ ಐದು ವರ್ಷದಿಂದ ಗ್ರಾಮದ ಉರುಗಮ್ಮ ದೇವಸ್ಥಾನಕ್ಕೆ ಗುಡ್ಡಪ್ಪನ ಸಮಸ್ಯೆ ಇತ್ತು. ಈ ಸಮಸ್ಯೆಗೆ ಗುಡ್ಡಪ್ಪನನ್ನು ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಸ್ವಾಮಿಯ ಬಸಪ್ಪ ಮತ್ತೊಂದು ಪವಾಡ ಸೃಷ್ಟಿಸಿತು.
ಉರುಗಮ್ಮ ದೇವಸ್ಥಾನಕ್ಕೆ ಗುಡಪ್ಪನನ್ನು ನೇಮಿಸಿ ಪವಾಡ ಮೆರೆದ ಬಸಪ್ಪ ಉರುಗಮ್ಮ ದೇವಿಗೆ ಇಬ್ಬರು ಗುಡ್ಡಪ್ಪ ಇದ್ದರು. ಈ ಪೈಕಿ ಐದು ವರ್ಷದ ಹಿಂದೆ ಮಸಣಯ್ಯ ಎಂಬುವವರು ಮೃತಪಟ್ಟಿದ್ದರು. ಇನ್ನು ಒಂದು ವರ್ಷದ ಹಿಂದೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಅಂತೆಯೇ ಗುಡ್ಡಪ್ಪನನ್ನು ನಿಯೋಜಿಸುವ ಸಂಬಂಧ ಗ್ರಾಮಸ್ಥರು ಮಾತುಕತೆ ನಡೆಸಿ ಅಂತಿಮವಾಗಿ ಚಿಕ್ಕರಸಿನಕೆರೆ ಬಸಪ್ಪನನ್ನು ಕರೆಸಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಓದಿ: ವರ್ಷದ ಹಿಂದಿನ ಕಳ್ಳತನ ಪ್ರಕರಣ ಆರೋಪಿ ಬಂಧಿಸಿದ ಸೇಡಂ ಪೊಲೀಸರು..!
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಒಂದನೇ ವರ್ಷದ ವಾರ್ಷಿಕೋತ್ಸವದ ಜೊತೆಗೆ ಗುಡ್ಡಪ್ಪನ ಆಯ್ಕೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗ್ರಾಮದಲ್ಲಿರುವ ಬೀರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನಡೆಸಿ ಗುಡ್ಡಪ್ಪನನ್ನು ಆಯ್ಕೆ ಮಾಡುವಂತೆ ಗ್ರಾಮಸ್ಥರು ಬಸಪ್ಪನ ಬಳಿ ಮನವಿ ಮಾಡಿಕೊಂಡರು.
ನಂತರ ಗ್ರಾಮದ ಕೆಲವರ ಬಳಿ ಹೋದ ಬಸಪ್ಪ ಅಂತಿಮವಾಗಿ ಶಿವಣ್ಣ ಎಂಬವರನ್ನು ಆಯ್ಕೆ ಮಾಡಿತು. ಅಂತೆಯೇ ನೀರಿನ ಕೊಳಕ್ಕೆ ತಳ್ಳಿತು. ಬಸಪ್ಪನ ತೀರ್ಮಾನವನ್ನು ಒಪ್ಪಿದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಸಹಸ್ರಾರು ಜನರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಚಿಕ್ಕರಸಿನಕೆರೆ ಬಸಪ್ಪನಿಗೆ ಗ್ರಾಮದ ಬೀರೇಶ್ವರ ದೇವರ ಬಸಪ್ಪ ಸಾಥ್ ನೀಡಿತು.