ಮಂಡ್ಯ: ಸದ್ಯ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಎರಡು ಹೆಸರುಗಳು ಅಂದರೆ ಉರಿಗೌಡ ಮತ್ತು ದೊಡ್ಡನಂಜೇಗೌಡ. ಈ ಎರಡು ಹೆಸರು ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ ಸಮರಕ್ಕೂ ಕಾರಣವಾಗಿದೆ.
ಉರಿಗೌಡ ಮತ್ತು ದೊಡ್ಡನಂಜೇಗೌಡ ಎಂಬುದು ಕಲ್ಪನೆಯ ಪಾತ್ರ ಎಂದು ಕಾಂಗ್ರೆಸಿನವರು ಹೇಳುತ್ತಿದ್ದರೇ, ಮತ್ತೊಂದೆಡೆ ಟಿಪ್ಪು ಸುಲ್ತಾನ್ ಕೊಂದಿದ್ದೇ ಈ ಇಬ್ಬರು ಎಂದು ಕಮಲ ಕಲಿಗಳು ವಾದಕ್ಕಿಳಿದಿದ್ದಾರೆ. ಈ ಬೆನ್ನಲ್ಲೇ ಉರಿಗೌಡ, ದೊಡ್ಡನಂಜೇಗೌಡರ ದಾಖಲೆ ನೀಡುವಂತೆ ಸಾಹಿತಿ ಜಗದೀಶ್ ಕೊಪ್ಪ ಆಗ್ರಹಿಸಿದ್ದಾರೆ.
ಟಿಪ್ಪು ಸುಲ್ತಾನ್ ಕೊಂದಿದ್ದು ಉರಿಗೌಡ ಮತ್ತು ದೊಡ್ಡನಂಜೇಗೌಡ ಎಂದು ಯಾವಾಗ ಬಿಜೆಪಿ ನಾಯಕರು ಹೇಳಿದರೋ ಆ ಬೆನ್ನಲ್ಲೇ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ಕಮಲ ನಾಯಕರ ಹೇಳಿಕೆಗೆ ತಿರುಗೇಟು ನೀಡುತ್ತಿರುವ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಗದೀಶ್ ಕೊಪ್ಪ ದಾಖಲೆ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ, ಉರಿಗೌಡ ಮತ್ತು ದೊಡ್ಡನಂಜೇಗೌಡ ಇದ್ದರು ಎಂಬ ವಾದವನ್ನು ಕೆಲವು ಸಾಹಿತಿಗಳು ವಿರೋಧಿಸುತ್ತಿದ್ದಾರೆ.
ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಾಹಿತಿ ಜಗದೀಶ್ ಕೊಪ್ಪ ಅವರು, ಕಟ್ಟು ಕಥೆಯಿಂದ 3ನೇ ದರ್ಜೆ ರಾಜಕಾರಣ ಮಾಡಿ ಐತಿಹಾಸಿಕ ಹಿನ್ನೆಲೆಯುಳ್ಳ ಮಂಡ್ಯಕ್ಕೆ ಮಸಿ ಬಳಿಯುವ ಕೆಲಸವಾಗುತ್ತಿದೆ. ವಿಶ್ವದಾದ್ಯಂತ ಟಿಪ್ಪು ಬಗ್ಗೆ ರಚಿತವಾಗಿರುವ 600 ಪುಸ್ತಕಗಳಲ್ಲಿ ಈ ಇಬ್ಬರ ಹೆಸರು ಎಲ್ಲು ಉಲ್ಲೇಖವಾಗಿಲ್ಲ. ಸುಳ್ಳು ಇತಿಹಾಸ ಸೃಷ್ಟಿ ಮಾಡಿ ವಿಷ ಕಕ್ಕುತ್ತಿದ್ದಾರೆ. ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.