ಮಂಡ್ಯ: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಹಿರೀಕಳಲೆ ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಹಿರೀಕಳಲೆ ಗ್ರಾಮದ ಸಂದೇಶ್ (23), ಮತ್ತು ಮರಡಹಳ್ಳಿಯ ಭರತ್ (25) ಮೃತರು. ಇಬ್ಬರು ಯುವಕರು ಎಳನೀರು ವ್ಯಾಪಾರ ಮಾಡಿಕೊಂಡು, ತಮ್ಮ ಮನೆಯ ಸಂಸಾರಕ್ಕೆ ಆಸರೆಯಾಗಿದ್ದರು. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಕೆ.ಆರ್. ಪೇಟೆ ಕಡೆಯಿಂದ ಹಿರೀಕಳಲೆ ಊರಿನ ಕಡೆ ಹೋಗುವಾಗ ಅಪಘಾತ ಸಂಭವಿಸಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ವಾಹನದ ಪತ್ತೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್. ಪೇಟೆ ಪಟ್ಟಣದಲ್ಲಿ ಶೇ. 50ರಷ್ಟು ಮನೆಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದಾರೆ. ಅಗತ್ಯ ಇರುವ ಕಡೆ ಪರಿಶೀಲನೆ ನಡೆಸಿ, ಅಫಘಾತ ನಡೆಸಿದ ವಾಹನ ಪತ್ತೆ ಹಚ್ಚಬೇಕೆಂದು ಹಿರೀಕಳಲೆ ಹಾಗೂ ಮರಡಹಳ್ಳಿ ಹಾಗೂ ಕೆ.ಆರ್. ಪೇಟೆ ಟೌನ್ ಅಗ್ರಹಾರ ಬಡಾವಣೆ ನಾಗರೀಕರು ಪೊಲೀಸರನ್ನು ಒತ್ತಾಯ ಮಾಡಿದ್ದಾರೆ.
ಅಪಘಾತಕ್ಕೆ ಕಾರಣವಾಗಿದ್ದ ರಸ್ತೆಬದಿಯ ಗಿಡಗಂಟಿ ತೆರವು:ಮೈಸೂರಿನ ಟಿ. ನರಸೀಪುರ ಬಳಿಯ ಕುರುಬೂರು ಬಳಿ, ಭೀಕರ ರಸ್ತೆ ಅಪಘಾತದಲ್ಲಿ 11 ಜನರನ್ನು ಬಲಿ ತೆಗೆದುಕೊಂಡ ಹೆದ್ದಾರಿ ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆದು ನಿಂತ ಗಿಡಗಂಟಿಗಳನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಟಿ. ನರಸೀಪುರ ನಗರಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು, ಚಾಮರಾಜನಗರ, ಮಳವಳ್ಳಿ ಭಾಗದ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಬೆಳೆದು ನಿಂತ ಗುಡಮರಗಳಿಂದ ರಸ್ತೆ ತಿರುವಿನಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿತ್ತು.