ಮಂಡ್ಯ: ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಫ್ಲೈ ಓವರ್ ಬಳಿ ಇಂದು ನಡೆದಿದೆ. ಮಣಿ (25) ಹಾಗೂ ಜನಾರ್ಧನ ಪೂಜಾರಿ (21) ಮೃತರೆಂದು ಗುರುತಿಸಲಾಗಿದೆ.
ಮುಂಜಾನೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮಣಿ ಕೋಲಾರ ಜಿಲ್ಲೆಯವರಾಗಿದ್ದು, ಮತ್ತೊಬ್ಬ ಯುವಕ ಜನಾರ್ಧನ್ ಪೂಜಾರಿ ಕೊಪ್ಪಳ ಜಿಲ್ಲೆಯ ಲಿಂಗದಮಂಡಿ ಗ್ರಾಮದ ನಿವಾಸಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಮೈಸೂರಿಗೆ ತೆರಳುವ ವೇಳೆ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು...
ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಚುನಾವಣಾ ಸಿಬ್ಬಂದಿ:ಇತ್ತೀಚೆಗೆ ಮಂಡ್ಯ ಜಿಲ್ಲೆಯ ಗಡಿ ಭಾಗ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ ಪೋಸ್ಟ್ ಬಳಿ ರಸ್ತೆ ಅಪಘಾತ ಸಂಭವಿಸಿತ್ತು. ಚುನಾವಣಾ ಸಿಬ್ಬಂದಿ ಕೂದಲೆಳೆ ಅಂತರದಿಂದ ಪಾರಾಗಿದ್ದರು. ಇಬ್ಬರು ಕಾರು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ:ಮಂಡ್ಯ ಚೆಕ್ ಪೋಸ್ಟ್ ಬಳಿ ರಸ್ತೆ ಅಪಘಾತ : ಕೂದಲೆಳೆ ಅಂತರದಲ್ಲಿ ಪಾರಾದ ಚುನಾವಣಾ ಸಿಬ್ಬಂದಿ
ಯುವತಿ ಸಾವು, ಬೈಕ್ ಸವಾರ ಗಂಭೀರ:ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಹಾಗಾಗಿ ಇದು ಮೃತ್ಯು ಕೂಪವಾಗುತ್ತಿದೆಯಾ? ಎಂಬ ಅನುಮಾನ ಕಾಡತೊಡಗಿದೆ. ಕಳೆದ ಆರು ತಿಂಗಳಲ್ಲಿ 77 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 28 ಜನರು ಸಾವಿಗೀಡಾಗಿದ್ದರು.
ಕಳೆದ ಮಾ. 25ರಂದು ನಡೆದ ಭೀಕರ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿತ್ತು. ತಮಿಳುನಾಡು ಮೂಲದ ಪ್ರಿಯಾಂಕ ರಾಜು(32) ಮೃತ ಯುವತಿ. ಹಾಸನದ ದಾಸನಕೊಪ್ಪಲು ನಿವಾಸಿ ಬೈಕ್ ಸವಾರ ಲಕ್ಷ್ಮೀನಾರಾಯಣ ಗೌಡ ಪರಿಸ್ಥಿತಿ ಗಂಭೀರವಾಗಿತ್ತು. ಇವರಿಬ್ಬರೂ ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಸಹೋದ್ಯೋಗಿಗಳು. ಬೈಕ್ನಲ್ಲಿ ಮೈಸೂರು ಪ್ರವಾಸಕ್ಕೆಂದು ಹೋಗಿದ್ದರು. ವಾಪಸ್ ಬೆಂಗಳೂರಿಗೆ ಹೋಗುವಾಗ ಅಪಘಾತ ನಡೆದಿತ್ತು. ಲಕ್ಷ್ಮೀನಾರಾಯಣ ಗೌಡಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು. ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂ-ಮೈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಅತಿ ವೇಗದಿಂದ ನಿತ್ಯ ಒಂದಲ್ಲೊಂದು ಕಡೆ ಅಪಘಾತಗಳು ಸಂಭವಿಸಿ, ಸಾವು ನೋವುಗಳು ಉಂಟಾಗುತ್ತಿವೆ. ಹೀಗಾಗಿ ಇದು ಅಪಾಯಕಾರಿ ಹೆದ್ದಾರಿಯಾಗಿ ಮಾರ್ಪಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ:ಬೆಂ-ಮೈ ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ: ಯುವತಿ ಸಾವು, ಬೈಕ್ ಸವಾರ ಗಂಭೀರ