ಮನ್ ಮುಲ್ ಚುನಾವಣೆ ಮುಂದೂಡಿಕೆ ಮಂಡ್ಯ : ಸಾಕಷ್ಟು ಕುತೂಹಲ ಮೂಡಿಸಿದ್ದ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮುನ್ಮುಲ್) ಅಧ್ಯಕ್ಷರ ಚುನಾವಣೆ ಮುಂದೂಡಿಕೆಯಾಗಿದೆ. ಜೆಡಿಎಸ್ - ಬಿಜೆಪಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಸತಾಯಗತಾಯ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗದಂತೆ ಮೆಗಾ ಪ್ಲಾನ್ ಮಾಡಿಕೊಂಡಿದ್ದವು. ಆದರೆ ಸರ್ಕಾರ ಜೆಡಿಎಸ್‌ನ ಇಬ್ಬರು ಅಭ್ಯರ್ಥಿಯನ್ನು ಅನರ್ಹಗೊಳಿಸಿದ್ದರಿಂದ ಚುನಾವಣೆ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು (ಗುರುವಾರ) ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಹೀಗಾಗಿ ಬೆಳಗ್ಗೆಯೇ ಕಾಂಗ್ರೆಸ್‌ನಿಂದ ಬೋರೇಗೌಡ ಹಾಗೂ ಜೆಡಿಎಸ್‌ನ ಹೆಚ್.ಟಿ.ಮಂಜು, ರಘುನಂದನ್, ನೆಲ್ಲಿಗೆರೆ ಬಾಲು ಸೇರಿ ಒಟ್ಟು ನಾಲ್ವರು ನಾಮಪತ್ರ ಸಲ್ಲಿಸಿದರು. ಈ ವೇಳೆಗಾಗಲೇ ಜೆಡಿಎಸ್‌ನ ನಿರ್ದೇಶಕರಾದ ಬಿ.ಆರ್.ರಾಮಚಂದ್ರು ಮತ್ತು ವಿಶ್ವನಾಥ್ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಲಾಯಿತು. ಇದರಿಂದ ಬೇಸತ್ತ ಜೆಡಿಎಸ್ ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದರು. ಮತ್ತೊಂದೆಡೆ ಕಾಂಗ್ರೆಸ್‌ನ ನಿರ್ದೇಶಕರು ಕೂಡ ಚುನಾವಣೆಗೆ ಬಾರದೆ ಗೈರಾದರು. ಇದರಿಂದ ಚುನಾವಣಾ ಸಮಯ ಮುಗಿದ ಬಳಿಕ ಸಭೆಗೆ ಹಾಜರಾಗಿದ್ದ ಏಕೈಕ ನಿರ್ದೇಶಕ ಡಾಲು ರವಿ ಕೂಡ ವಿಧಿ ಇಲ್ಲದೇ ಹೊರ ನಡೆದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮನ್ ಮುಲ್ ನಿರ್ದೇಶಕ ಡಾಲು ರವಿ, ಇವತ್ತು ಚುನಾವಣೆ ಆಗಿರುವುದರಿಂದ ಎಲ್ಲರೂ ಬರಬೇಕಿತ್ತು. ಈಗಾಗಲೇ ನಾಲ್ವರು ಅರ್ಜಿ ಸಲ್ಲಿಸಿದ್ದು, ಯಾರು ಕೂಡ ಅರ್ಜಿ ಹಾಕುರುವುದನ್ನು ಹಿಂಪಡಯಲು ಸಹ ಬಂದಿಲ್ಲ. ಯಾಕೇ ಬಂದಿಲ್ಲ ಎಂಬ ಕಾರಣಗಳನ್ನು ಆ ನಾಲ್ವರು ಕೊಡಬೇಕು. ನನಗೆ ಬಂದಿರುವ ನೋಟಿಸ್ ಪ್ರಕಾರ ನಾನು ಮೀಟಿಂಗ್ನಲ್ಲಿ ಭಾಗಿಯಾಗಿ ಸಹಿ ಮಾಡಿ ಬಂದಿದ್ದೇನೆ. ನಾನು ಮುಂಚೆನೇ ಹೇಳಿದ್ದೇ ಬೋರೇಗೌಡ ಅವರು ಅರ್ಜಿ ಹಾಕಿದ್ದರೇ ನಾನು ಹಾಕುವುದಿಲ್ಲ ಎಂದು ನೇರವಾಗಿ ನಮ್ಮ ಎಲ್ಲ ನಾಯಕರಿಗೆ ಹೇಳಿದೆ. ಹಾಗೂ ನನ್ನ ಮತ ಬೋರೇಗೌಡ ಅವರಿಗೆ ಅಂತನೂ ಹೇಳಿದೆ. ಹೀಗಾಗಿ ನಾನು ಮಾತು ಕೊಂಟ್ಟಂತೆ ಕೇವಲ ಮತ ಹಾಕಲು ಬಂದಿದ್ದೇನೆ ಎಂದರು.
ಬಳಿಕ ಮಾತನಾಡಿದ ಚುನಾವಣಾಧಿಕಾರಿ ಹೆಚ್.ಎಲ್ ನಾಗರಾಜು ಅವರು, ಓರ್ವ ನಿರ್ದೇಶಕರನ್ನು ಹೊರತುಪಡಿಸಿ ಉಳಿದೆಲ್ಲ ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದ್ದಾರೆ. ಇದರಿಂದ ಒಂದು ಗಂಟೆಗೆ ನಿಗದಿಯಾಗಿದ್ದ ಚುನಾವಣಾ ಸಮಯವನ್ನು 2 ಗಂಟೆವರೆಗೂ ವಿಸ್ತರಿಸಲಾಯಿತು. ನಂತರ ಮಧ್ಯಾಹ್ನ 2 ಗಂಟೆಯಾದರೂ ಒಟ್ಟು 17 ಸದಸ್ಯರ ಪೈಕಿ ಮನ್ ಮುಲ್ ನಿರ್ದೇಶಕ ಡಾಲು ರವಿ ಅವರು ಒಬ್ಬರೇ ಸಭೆಯಲ್ಲಿ ಭಾಗಿಯಾಗಿ ಸಹಿ ಮಾಡಿ ಹೋಗಿದ್ದಾರೆ. ಆದರೇ ಉಳಿದ ಯಾವೊಬ್ಬ ನಿರ್ದೇಶಕರು ಚುನಾವಣೆಯಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಅಂತಿಮವಾಗಿ ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲಾಗಿದೆ. ಮುಂದಿನ ವಾರ ಸಹಕಾರ ಇಲಾಖೆ ನಿಯಮದಂತೆ ಚುನಾವಣೆ ನಡೆಸೋದಾಗಿ ತಿಳಿಸಿದರು.
ಇದನ್ನೂ ಓದಿ :KMF Nandini: ನಂದಿನಿ ಹಾಲು ಮಾರಾಟಕ್ಕೆ ಕೇರಳದಲ್ಲಿ ವಿರೋಧ; ಮಳಿಗೆ ವಿಸ್ತರಿಸದಿರಲು ಕೆಎಂಎಫ್ ನಿರ್ಧಾರ