ಕರ್ನಾಟಕ

karnataka

ETV Bharat / state

ಕೆ.ಆರ್‌.ಪೇಟೆಯಲ್ಲಿ ಬಸ್‌ ಉರುಳಿ 32 ಮಂದಿಗೆ ಗಾಯ, ಹುಕ್ಕೇರಿ ಸಮೀಪ ಹೊತ್ತಿ ಉರಿದ ಬಸ್

ಒಂದೆಡೆ, ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಉರುಳಿ ಬಿದ್ದರೆ, ಮತ್ತೊಂದೆಡೆ, ಶಾರ್ಟ್​ ಸರ್ಕ್ಯೂಟ್​ನಿಂದ ಸರ್ಕಾರಿ ಬಸ್ ಸುಟ್ಟು ಕರಕಲಾಗಿದೆ.

two different accidents
ಎರಡು ಪತ್ಯೇಕ ಅಪಘಾತ

By

Published : Jan 6, 2023, 2:19 PM IST

Updated : Jan 6, 2023, 4:05 PM IST

ಚಿಕ್ಕೋಡಿಯಲ್ಲಿ ಬಸ್​ಗೆ ಬೆಂಕಿ

ಮಂಡ್ಯ/ಚಿಕ್ಕೋಡಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್ ಉರುಳಿ ಬಿದ್ದು 32 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿಯ ಚನ್ನರಾಯಪಟ್ಟಣ- ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಗದಗದಿಂದ ಮೈಸೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಸ್ ವೇಗದಲ್ಲಿದ್ದರಿಂದ ತಡೆಗೋಡೆ ಮುರಿದಿದೆ. ಬಸ್ ಪಲ್ಟಿಯಾಗಿ ರಸ್ತೆ ಬದಿಯ ಜಮೀನಿಗೆ ಉರುಳಿ ಬಿದ್ದಿದೆ. ಗಾಯಾಳುಗಳನ್ನು ಕೆ ಆರ್ ಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡುರಸ್ತೆಯಲ್ಲಿ ಹೊತ್ತಿ ಉರಿದ ಸರ್ಕಾರಿ ಸಾರಿಗೆ ಬಸ್:ಶಾರ್ಟ್ ಸರ್ಕ್ಯೂಟ್​ನಿಂದಾಗಿ ನಡು ರಸ್ತೆಯಲ್ಲೇ ಸರ್ಕಾರಿ ಸಾರಿಗೆ ಬಸ್ ಒಂದು ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತಗರಿ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಸಂಕೇಶ್ವರ ಘಟಕಕ್ಕೆ ಸೇರಿದ ಕೆ ಎ 23 ಎಫ್​ 950 ನಂಬರ್​ನ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸಂಕೇಶ್ವರ ಪಟ್ಟಣದಿಂದ ಬೆಳಗಾವಿ ನಗರಕ್ಕೆ ಹೋಗುವ ದಾರಿ ಮಧ್ಯದಲ್ಲಿ ಅವಘಡ ಸಂಭವಿಸಿದೆ.

ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ

ರಸ್ತೆಯಲ್ಲಿ ಬಸ್​ ಸಾಗುತ್ತಿದ್ದಾಗ ಮೊದಲಿಗೆ ಇಂಜಿನ್​ನಲ್ಲಿ ದಟ್ಟವಾದ ಹೊಗೆ ಕಂಡು ಬಂದಿದೆ. ಇದನ್ನು ನೋಡುತ್ತಿದ್ದಂತೆ ಚಾಲಕ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿದ್ದಾರೆ. ಬಸ್​ನಲ್ಲಿದ್ದ ಪ್ರಯಾಣಿಕರು ಹಾಗೂ ನಿರ್ವಾಹಕ, ಚಾಲಕ ಕೆಳಗೆ ಇಳಿದು ಪಕ್ಕಕ್ಕೆ ನಿಲ್ಲುತಿದಂತೆ ಬಸ್ಸಿಗೆ ಬೆಂಕಿ ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಈ ಘಟನೆಯಿಂದ ಕೆಲವು ಹೊತ್ತು ಹೆದ್ದಾರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಮಕಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಬೆಳಗಾವಿಯಲ್ಲಿ ನಿನ್ನೆಯಷ್ಟೇ ನಡೆದಿತ್ತು ದುರಂತ: ನಿನ್ನೆಯಷ್ಟೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಗೂಡ್ಸ್​ ವಾಹನ ಮರಕ್ಕೆ ಗುದ್ದಿ 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿತ್ತು. ಸವದತ್ತಿ ಯಲ್ಲಮ್ಮನ ದರ್ಶನಕ್ಕೆಂದು ಹೊಟಿದ್ದ ಭಕ್ತರನ್ನು ಕರೆದೊಯ್ಯುತ್ತಿದ್ದ ಗೂಡ್ಸ್​ ವಾಹನ ಮುಂಜಾನೆ ಹೊತ್ತು ಚಾಲಕನ ನಿಯಂತ್ರಣ ತಪ್ಪಿ ಚುಂಚನೂರು ಹತ್ತಿರ ವಿಠ್ಠಲ್​ ರುಕ್ಮಿಣಿ ದೇವಸ್ಥಾನದ ಮುಂದೆ ಇರುವ ಬೃಹತ್​ ಆಲದ ಮರಕ್ಕೆ ಡಿಕ್ಕಿ ಹೊಡೆದಿತ್ತು.

ಭಾರಿ ವೇಗವಾಗಿ ಚಲಿಸುತ್ತಿದ್ದ ಕಾರಣ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಗೂಡ್ಸ್​ ವಾಹನ ಉರುಳಿ ಬಿದ್ದಿದೆ. ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಗಾಯಾಳುಗಳನ್ನು ಅದೇ ದಾರಿಯಲ್ಲಿ ದೇವರ ದರ್ಶನಕ್ಕೆ ಸಾಗುತ್ತಿದ್ದ ಇತರ ಭಕ್ತರು ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ:ದೇವನಹಳ್ಳಿಯಲ್ಲಿ ಸರಣಿ ರಸ್ತೆ ಅಪಘಾತ: 5 ಕಾರು, 4 ಬೈಕ್​ ಜಖಂ

Last Updated : Jan 6, 2023, 4:05 PM IST

ABOUT THE AUTHOR

...view details