ಬೆಂಗಳೂರು:ಮಾಜಿ ಸಚಿವ ಹಾಗೂ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಕಾರ್ಯಕರ್ತರು ಇಂದು ಬೆಳಗ್ಗೆಯಿಂದಲೇ ಆನೇಕಲ್-ಅತ್ತಿಬೆಲೆ ರಸ್ತೆಯ ಬೆಸ್ತಮಾನಹಳ್ಳಿಯಲ್ಲಿ ರಸ್ತೆ ತಡೆದು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟಿಸಿದ್ರು.
ಚಿಕ್ಕಬಳ್ಳಾಪುರದಲ್ಲೂ ಪ್ರತಿಭಟನೆ:
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಪ್ರದರ್ಶಿಸಿದ್ರು.
ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ,ಹನೂರು ಬಂದ್:
ಜಿಲ್ಲಾ ಕೇಂದ್ರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ, ಮಾಜಿ ಸಂಸದ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಕೈ ಕಾರ್ಯಕರ್ತರು ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ್ರು. ಗುಂಡ್ಲುಪೇಟೆಯಲ್ಲೂ ಪ್ರತಿಭಟನೆ ನಡೆಸಲಾಗಿದೆ. ಶಾಸಕ ಆರ್.ನರೇಂದ್ರ ನೇತೃತ್ವದಲ್ಲಿ ಹನೂರು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಸಂಜೆ 4 ರತನಕ ಪಟ್ಟಣದಲ್ಲಿ ಬಂದ್ ನಡೆಸಲು ಉದ್ದೇಶಿಸಲಾಗಿದೆ.
ಬೆಣ್ಣೆನಗರಿಯಲ್ಲಿ ಪ್ರತಿಭಟನೆ:
ನಗರದ ಜಯದೇವ ವೃತ್ತದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್ ಬಿ ಮಂಜಪ್ಪ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಬಿಜೆಪಿಯಿಂದ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ಬಂಧನದ ಹಿಂದೆ ಬಿಜೆಪಿ ಕುತಂತ್ರ ಅಡಗಿದೆ ಎಂದು ಕೆಂಡ ಕಾರಿದ್ರು.
ಧಾರವಾಡ- ಮಂಡ್ಯದಲ್ಲಿ 'ಕೈ' ಕೋಪ:
ಕಾಂಗ್ರೆಸ್ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದ್ರು.
ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಡಿಕೆಶಿ ಪರ ಪ್ರತಿಭಟನೆ ಮಾಡಿದ್ರು. ನಗರದ ಸರ್.ಎಂ.ವಿ ಪ್ರತಿಮೆ ಬಳಿ ಧರಣಿ ನಡೆಸಿದ ಅವರು ಪಿಎಂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಮೊಳಗಿಸಿದ್ರು. ಇದೇ ವೇಳೆ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಸಿಟ್ಟು ತೋರಿಸಿದ್ರು.