ಮಂಡ್ಯ :ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಈಗಾಗಲೇ ನೈಟ್ ಕರ್ಫ್ಯೂ ಜಾರಿಗೊಳಿಸಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದ್ರೆ, ಹೊಸ ವರ್ಷ ಆಚರಣೆ ಹಿನ್ನೆಲೆ ಇದೀಗ ಪ್ರವಾಸಿತಾಣಗಳ ಸ್ಥಳಗಳಲ್ಲೂ ಸಂಭ್ರಮಾಚರಣೆಗೆ ಈ ಬಾರಿಯೂ ಬ್ರೇಕ್ ಬಿದ್ದಿದೆ.
ಮಂಡ್ಯ ಜಿಲ್ಲಾ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ನೋ ಎಂಟ್ರಿ
ಸಕ್ಕರೆ ನಾಡು ಮಂಡ್ಯ ಅತಿ ಹೆಚ್ಚು ಪ್ರವಾಸಿ ತಾಣಗಳನ್ನ ಹೊಂದಿರುವ ಜಿಲ್ಲೆ. ಪ್ರತಿ ವರ್ಷ ಸಾರ್ವಜನಿಕರು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳಿ ಹೊಸ ವರ್ಷ ಸಂಭ್ರಮಾಚರಣೆ ಮಾಡ್ತಾರೆ. ಆದರೆ, ರಾಜ್ಯದಲ್ಲಿ ಒಮಿಕ್ರಾನ್ ಆತಂಕ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಇಂದಿನಿಂದ ಜನವರಿ 1ರ ರಾತ್ರಿ 10 ಗಂಟೆವರೆಗೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಜಿಲ್ಲೆಯಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆಗೆ ಈ ಬಾರಿಯೂ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಪ್ರಸಿದ್ದ ಪ್ರವಾಸಿ ತಾಣಗಳಾದ ಮೇಲುಕೋಟೆ, ಕೆಆರ್‌ಎಸ್, ಬಲಮುರಿ, ಮುತ್ತತ್ತಿ, ಗಗನಚುಕ್ಕಿ, ನಿಮಿಷಾಂಬ, ಶ್ರೀರಂಗಪಟ್ಟಣ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಿ ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ.
ಇತ್ತ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಕೂಡ ತಾಲೂಕಿನ ಪ್ರವಾಸಿ ತಾಣ ವಿಶ್ವ ಪ್ರಸಿದ್ಧ ಕೆಆರ್‌ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಠಿಣ ಕ್ರಮ- ಡಿಸಿ ಎಚ್ಚರಿಕೆ
ಇನ್ನೂ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ. ಈಗಾಗಲೇ ನೈಟ್ ಕರ್ಫ್ಯೂ ಜಾರಿ ಇದ್ದು, ರಾತ್ರಿ 10 ಗಂಟೆವರೆಗೂ 50-50 ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಬಳಿಕ ಎಲ್ಲವನ್ನು ಸಂಪೂರ್ಣವಾಗಿ ಮುಚ್ಚಬೇಕು.
ಸಿಬ್ಬಂದಿ ಹಾಗೂ ಇತರೆ ಜನರು ಮನೆಗಳಿಗೆ ತಲುಪಲು ರಾತ್ರಿ 10 ಗಂಟೆ ಬಳಿಕ ಕೆಲ ಹೊತ್ತಿನವರೆಗೂ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತೆ. ಒಂದು ವೇಳೆ ರಾಜ್ಯ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ್ರೆ, ವಿಪತ್ತು ನಿರ್ವಹಣೆ ಕಾಯ್ದೆ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನ ಎಸ್ಪಿ ಯತೀಶ್ ನೀಡಿದ್ದಾರೆ.
ಕೊರೊನಾದಿಂದ ಕಳೆದ ಎರಡೂ ವರ್ಷಗಳಿಂದ ಹೊಸ ವರ್ಷ ಆಚರಣೆಗೆ ಬ್ರೇಕ್ ಬಿದ್ದಿತ್ತು. ಆದ್ರೆ, ಈ ಬಾರಿಯಾದರೂ ಹೊಸ ವರ್ಷ ಆಚರಣೆ ಮಾಡಬೇಕು ಅಂದುಕೊಂಡಿದ್ದವರಿಗೆ ಜಿಲ್ಲಾಡಳಿತ ಮತ್ತೆ ಶಾಕ್ ನೀಡಿದೆ.
ಇದನ್ನೂ ಓದಿ:ಗಲ್ಲಿ ಗಲ್ಲಿಯಲ್ಲಿ ಬ್ಯಾರಿಕೇಡ್ ಹಾಕಿ ನೈಟ್ ಕರ್ಫ್ಯೂ ಟೈಟ್ ಮಾಡಲಿದ್ದಾರೆ ಪೊಲೀಸರು