ಮಂಡ್ಯ: ನನಗೆ 20ನೇ ಕ್ರಮ ಸಂಖ್ಯೆ ನೀಡಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಇಂದು ಕೂಡ ಕೇಬಲ್ ಕಟ್ ಮಾಡಿದ್ದಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯಾನಾ ? ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬ್ಯಾಲೆಟ್ ಪೇಪರ್ನಲ್ಲಿ ಸುಮಲತಾ ಅಂತಾನೆ ಹೆಸರಿರುತ್ತೆ. ಸಿಎಂ ಹಿಂದಿನಿಂದಲೂ ಜನರನ್ನು ಮೋಸ ಮಾಡಿಕೊಂಡು ಬಂದಿದ್ದಾರೆ. ಮೂರು ಜನ ಸುಮಲತಾ ಸ್ಪರ್ಧೆಯಿಂದ ನನಗೇನು ನಷ್ಟ ಆಗಲ್ಲ, ಇದರಿಂದ 200-300 ವೋಟ್ ಆ ಕಡೆ, ಈ ಕಡೆ ಆಗಬಹುದು ಅಷ್ಟೇ ಎಂದರು.
ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ಐಟಿ ರೇಡ್ ನಡೆದಾಗ, ಸಿಎಂ ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಾರೆ, ಆದ್ರೆ ಇಲ್ಲಿ ನಡೆಯುತ್ತಿರುವ ಅನ್ಯಾಯ ಸರಿಪಡಿಸುವವರು ಯಾರು? ಎಂದು ಇದೇ ಸಂದರ್ಭದಲ್ಲಿ ಸುಮಲತಾ ಪ್ರಶ್ನಿಸಿದ್ರು. ನಮಗೆ ನ್ಯಾಯ ಸಿಗುತ್ತೆ, ಸ್ವಲ್ಪ ನಿಧಾನವಾಗಬಹುದು, ನಿಖಿಲ್ ಸ್ಪರ್ಧೆಯಿಂದ ನನಗೆ ಯಾವುದೇ ಭಯವಿಲ್ಲ. ಆದ್ರೆ ಅವರು ನೇರವಾಗಿ ಚುನಾವಣೆ ಮಾಡಲಿ, ಹಿಂಬಾಗಿಲ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ಸಿಎಂ ಹೆಚ್ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ ನಡೆಸಿದರು.
ನಾಮಪತ್ರ ಸಲ್ಲಿಸಿದ ದಿನವೇ ಕ್ರಮಾಂಕ ಘೋಷಣೆಯಾಗುತ್ತೆ, ನಿಖಿಲ್ ಕ್ರಮಾಂಕ 1 ಎಂದು ಸಿಎಂ ಹೆಚ್ಡಿಕೆ ಬಹಿರಂಗ ಪ್ರಚಾರದ ವೇಳೆ ಘೋಷಿಸುತ್ತಾರೆ. ಹಾಗಾಗಿ ಎಲ್ಲರೂ ನ್ಯಾಯದ ಪರ ವಿಚಾರ ಮಾಡಬೇಕಿದೆ. ಮಂಡ್ಯದಲ್ಲಿ ಇಂದು ಕೂಡ ಕೇಬಲ್ ಸ್ಥಗಿತಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.