ಮಂಡ್ಯ: ಸಿಎಂ ಕುಮಾರಸ್ವಾಮಿ ತಮಿಳುನಾಡು ಭೇಟಿ ಭಾರೀ ಕುತೂಹಲ ಮೂಡಿಸಿದೆ. ಅವರು ಮಾಡುವ ಯಾಗವನ್ನು ವಿಡಿಯೋ ಚಿತ್ರೀಕರಣ ಮಾಡಿ ಕನ್ನಡಿಗರ ಅನುಮಾನ ನಿವಾರಣೆ ಮಾಡಿ. ಹೀಗೆ ತಮಿಳುನಾಡಿನ ಸಿಎಂಗೆ ಬಿಜೆಪಿ ಮುಖಂಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಡ್ಯದ ಬಿಜೆಪಿ ಹಾಗೂ ವಿಹೆಚ್‌ಪಿ ಮುಖಂಡ ಸಿ.ಟಿ.ಮಂಜುನಾಥ್ ಪತ್ರ ಬರೆದು ತಮಿಳುನಾಡು ಸಿಎಂಗೆ ಮೇಲ್ ಮೂಲಕ ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಮಾಡುವ ಯಾಗದ ಸಂಪೂರ್ಣ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ತಮ್ಮ ಮೇಲ್‌ನಲ್ಲಿ ಸಿಎಂ ಕುಮಾರಸ್ವಾಮಿ ಅವರು ತಮಿಳುನಾಡಿಗೆ ಪೂಜೆ ಮಾಡಿಸಲೋ ಅಥವಾ ಹೋಮ ಹವನ, ಯಜ್ಞ, ಯಾಗಾದಿಗಳನ್ನು ಮಾಡಿಸಲು ಬರುತ್ತಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ.
ಈ ಮಧ್ಯೆ ತಮಿಳುನಾಡಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಅವರು ಯಾವ ಪೂಜೆ ಮಾಡುತ್ತಾರೆ, ಅದು ಶತ್ರು ಸಂಹಾರ ಯಾಗವೋ, ಮತ್ತೊಂದೋ ತಿಳಿಯದು. ಆದ್ದರಿಂದ ದಯವಿಟ್ಟು ತಮ್ಮ ಸರ್ಕಾರ ಸನ್ಮಾನ್ಯ ಕುಮಾರಸ್ವಾಮಿಯವರು ಮಾಡುವ ಪೂಜೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ತಮ್ಮಲ್ಲಿ ಕುತೂಹಲದಿಂದ ಮನವಿ ಮಾಡುತ್ತೇನೆ.
ಹಾಗೂ ಅವರ ಕುಟುಂಬಕ್ಕೆ ಆ ಭಗವಂತ ಆಯಸ್ಸು, ಅರೋಗ್ಯ ನೀಡಿ ನೂರ್ಕಾಲ ಕಾಪಾಡಲಿ ಎಂದು ಆ ಭಗವಂತನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತೇನೆ. ಜೊತೆಗೆ ಕಾವೇರಿ ಸಮಸ್ಯೆಗೆ ಪರಿಹಾರವಾದ ಮೇಕೆದಾಟು ಯೋಜನೆ ಬಗ್ಗೆ ಪರಸ್ಪರ ಜೊತೆ ಕುಳಿತು ಚರ್ಚಿಸಿ ಯಾವುದೇ ಅಡೆ ತಡೆಯಿಲ್ಲದೆ ಶೀಘ್ರ ನಿರ್ಮಾಣವಾಗಿ ಎರಡು ರಾಜ್ಯದ ರೈತರು ನೆಮ್ಮದಿಯಿಂದ ಬಾಳುವಂತಹ ಪ್ರಯತ್ನ ಮಾಡಿ ಎಂದು ತಮಿಳುನಾಡಿನ ಮುಖ್ಯಮಂತ್ರಿಗಳಿಗೂ, ಪೂಜೆಗಾಗಿ ಅಲ್ಲಿಗೆ ಬರುತ್ತಿರುವ ನಮ್ಮ ಕುಮಾರಣ್ಣನಿಗೂ ಕಾವೇರಿ ಕೊಳ್ಳದ ಅನ್ನದಾತರ ಪರವಾಗಿ ಮನವಿ ಮಾಡುತ್ತೇನೆ ಎಂದು ಮೇಲ್ ಮಾಡಿದ್ದಾರೆ.