ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಅಖಾಡದ ಫಲಿತಾಂಶಕ್ಕೆ ಚುನಾವಣಾ ಆಯೋಗ ಸಿದ್ಧತೆಯಲ್ಲಿ ತೊಡಗಿದೆ. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯಬೇಕಾದರೆ ಮೂರು ಸುತ್ತಿನ ಭದ್ರತೆಯನ್ನು ದಾಟಿ ಹೋಗಬೇಕಾಗಿದೆ. ರಾಜ್ಯ ಪೊಲೀಸರ ಜೊತೆಗೆ ಕೇಂದ್ರ ಅರೆ ಸೇನಾ ಪಡೆ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಅಧಿಕಾರಿಗಳು, ಎಣಿಕೆ ಅಧಿಕಾರಿಗಳು, ಅಭ್ಯರ್ಥಿಗಳ ಏಜೆಂಟ್ ಮತ ಎಣಿಕೆ ಕೇಂದ್ರಕ್ಕೆ ಹೋಗಬೇಕಾದರೆ ಮೂರು ಬಾರಿ ತಪಾಸಣೆ ಎದುರಿಸಬೇಕಾಗಿದೆ. ಸರ್ಕಾರಿ ಮಹಾ ವಿದ್ಯಾಲಯದ ಮೊದಲ ಗೇಟ್‌ನಲ್ಲೇ ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಎಸಿ ನೇತೃತ್ವದಲ್ಲಿ ತಪಾಸಣೆ ಮಾಡಿ ಒಳಬಿಡಲಾಗುತ್ತದೆ.
ಎರಡನೇ ಹಂತದ ತಪಾಸಣೆಯನ್ನು ಕೇಂದ್ರ ಅರೆ ಮೀಸಲು ಪಡೆ ಹಾಗೂ ಸ್ಥಳೀಯ ಪೊಲೀಸರು ನಡೆಸಿ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಏಜೆಂಟರ್‌ಗಳನ್ನು ವರ್ಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
ನಂತರ ಮೂರನೇ ತಪಾಸಣೆಯನ್ನು ಬಿಎಸ್‌ಎಫ್ ಯೋಧರು ಮಾಡಲಿದ್ದು, ಇಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಕೊಠಡಿಯೊಳಗೆ ಹೋಗದಂತೆ ಸೂಕ್ಷ್ಮ ತಪಾಸಣೆ ಮಾಡಿ ಕೊಠಡಿಗೆ ಬಿಡಲು ಚುನಾವಣಾ ಆಯೋಗ ತೀರ್ಮಾನ ಮಾಡಿದೆ. ಮೂರು ಹಂತಗಳ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಸಂಪೂರ್ಣವಾಗಿ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಮಾಧ್ಯಮ ಕೇಂದ್ರಕ್ಕೆ ಮಾತ್ರ ಮೊಬೈಲ್ ಬಳಕೆ ಅವಕಾಶ ನೀಡಲಾಗಿದ್ದು, ಎಣಿಕೆ ಕೊಠಡಿಗೆ ಹೋಗಬೇಕಾದರೆ ಸಂಬಂಧಪಟ್ಟ ಅಧಿಕಾರಿ ಬಳಿ ಮೊಬೈಲ್ ಇರಿಸಿ ಹೋಗಬೇಕಾಗಿದೆ.
ಪ್ರತಿ ಕೊಠಡಿಯಲ್ಲೂ ಎರಡು ಸಿಸಿ ಕ್ಯಾಮರಾ ಅಳವಡಿಕೆ ಜೊತೆಗೆ ಓರ್ವ ಕ್ಯಾಮರಾಮನ್ ನೇಮಕ ಮಾಡಲಾಗಿದೆ. ಕೊಠಡಿಯೊಳಗಿನ ಎಲ್ಲಾ ಚಲನವಲನಗಳು ಕ್ಯಾಮರಾಗಳಲ್ಲಿ ದಾಖಲಾಗಲಿವೆ.