ಕರ್ನಾಟಕ

karnataka

ETV Bharat / state

ಮದ್ದೂರಿನಲ್ಲಿ ದಾರುಣ ಘಟನೆ.. ಕೆರೆಯಲ್ಲಿ ಮುಳುಗಿ ಮಹಿಳೆ, ಇಬ್ಬರು ಮಕ್ಕಳು ಸಾವು - ಮಂಡ್ಯ

ಕೆರೆಯಲ್ಲಿ ಮುಳುಗಿ ಮಹಿಳೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ.

Mandya
ಶೈಲಜಾ

By

Published : Apr 16, 2023, 10:33 AM IST

ಮಂಡ್ಯ:ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮ ಕೆರೆಯ ಹಿನ್ನೀರಿನಲ್ಲಿ ಮುಳುಗಿ ಮಹಿಳೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ವಳಗೆರೆಹಳ್ಳಿ ಗ್ರಾಮದ ಮುತ್ತುರಾಜ್ ಪತ್ನಿ ಶೈಲಜಾ (40), ಮಗ ತೇಜಸ್ (10) ಹಾಗೂ ಪಕ್ಕದ ಮನೆಯ ಶ್ರೀನಿವಾಸ್ ಎಂಬುವವರ ಮಗ ಯೋಗನ್ ಗೌಡ (15) ಮೃತ ದುರ್ದೈವಿಗಳು.

ಎಂದಿನಂತೆ ವಳಗೆರೆಹಳ್ಳಿ ಗ್ರಾಮದ ಮದ್ದೂರಮ್ಮ ಕೆರೆ ಸಮೀಪ ಪ್ರತಿನಿತ್ಯ ಹಸು ಮೇಯಿಸಲು ಶೈಲಜಾ ಹೋಗುತ್ತಿದ್ದರು. ಶನಿವಾರ ಬೆಳಿಗ್ಗೆಯೂ ತನ್ನ ಮಗ ತೇಜಸ್ ಹಾಗೂ ಪಕ್ಕದ ಮನೆಯ ಶ್ರೀನಿವಾಸ್ ಅವರ ಮಗ ಯೋಗನ್ ಗೌಡ ಅವರ ಜತೆಗೆ ಕೆರೆ ಸಮೀಪ ಹಸು ಮೇಯಿಸಲು ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಮೂವರು ವಾಪಸ್​ ಆಗುವ ವೇಳೆ ಕೆರೆಯ ಹಿನ್ನೀರಿನ ಆಳವಾದ ಗುಂಡಿಗೆ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಮಕ್ಕಳನ್ನು ರಕ್ಷಣೆ ಮಾಡಲು ಹೋದಾಗ ಶೈಲಜಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮಸ್ಥರು ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಯುವಕರ ಸಾವು: ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಸಮೀಪ ಇತ್ತೀಚೆಗೆ ನಡೆದಿತ್ತು. ಮೃತರನ್ನು ಬಾಬಾಸಾಹೇಬ್ ಅಶೋಕ್ ಗೋರ್ (35), ನಾಗೇಶ್ ದಿಲೀಪ್ ಗೋರ್ (20), ಅಕ್ಷಯ್ ಭಾಗಿನಾಥ್ ಗೋರ್ (20) ಹಾಗೂ ಶಂಕರ ಪರಸ್ನಾಥ್ ಘೋಡ್ಕೆ (22) ಎಂದು ಗುರುತಿಸಲಾಗಿತ್ತು. ಮೃತರ ನಾಲ್ವರು ಯುವಕರು ಕೂಡ ವೈಜಾಪುರ ತಾಲೂಕಿನ ಪಾಲ್ಖೇಡ್ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಛತ್ರಪತಿ ಸಂಭಾಜಿ ನಗರದ ಪುಣೆ ಹೆದ್ದಾರಿ ಬಳಿಯ ಕಾಯಗಾಂವ್ ತೋಕೆ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಬಳಿಯಿರುವ ಗೋದಾವರಿ ನದಿಗೆ ಇಳಿದಿದ್ದರು. ಈ ವೇಳೆ ನದಿ ನೀರಿನ ಆಳ ತಿಳಿಯದೇ ನಾಲ್ವರು ಕೂಡ ಮುಳುಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ನದಿಯಲ್ಲಿ ಮುಳುಗಿ ನಾಲ್ವರು ಯುವಕರ ಸಾವು

ನಾಲ್ವರು ಸ್ನೇಹಿತರ ದುರ್ಮರಣ:ಈಜಲು ಹೋಗಿದ್ದ ನಾಲ್ವರು ಸ್ನೇಹಿತರು ಘಟಪ್ರಭಾ ನದಿಯಲ್ಲಿ ಮುಳುಗಿ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದೂಪದಾಳ ಗ್ರಾಮದ ಬಳಿ ಇತ್ತೀಚೆಗೆ ನಡೆದಿತ್ತು. ಮೃತರನ್ನು ಸಂತೋಷ ಬಾಬು ಇಟಗಿ(18), ಅಜಯ್ ಬಾಬು ಜೋರೆ(18), ಕೃಷ್ಣಾ ಬಾಬು ಜೋರೆ(22) ಮತ್ತು ಆನಂದ ಕೋಕರೆ(19) ಎಂದು ಗುರುತಿಸಲಾಗಿದೆ. ಮೃತಪಟ್ಟ ನಾಲ್ವರು ಯುವಕರು ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ:ಘಟಪ್ರಭಾ ನದಿಯಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಸಾವು

ABOUT THE AUTHOR

...view details