ಮಂಡ್ಯ:ಯುವಕನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ಯುವಕನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಅಂದರ್ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ದೊಡ್ಡಹಿರೇಗೌಡ ಅಲಿಯಾಸ್ ಗೌಡ್ರು (38), ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಜಿ.ಎಸ್.ಪ್ರಸನ್ನ ಅಲಿಯಾಸ್ ಮೂಗುರೇಗೌಡ (34) ಹಾಗೂ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕಲೂರು ಗ್ರಾಮದ ಸಿ.ಆರ್.ಪುರುಷೋತ್ತಮ್ ಅಲಿಯಾಸ್ ನಾಗ (29) ಬಂಧಿತ ಆರೋಪಿಗಳು.
ಪ್ರಕರಣ ಹಿನ್ನೆಲೆ:
ಆರೋಪಿಗಳು ಮಳವಳ್ಳಿ ತಾಲೂಕಿನ ಅಮೃತೇಶ್ವರನಹಳ್ಳಿಯ ಕೊಲೆಯಾದ ಸುರೇಶ್‌ನೊಂದಿಗೆ (24) ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಈರುಳ್ಳಿ ಮಾರಾಟದ ಕಮೀಷನ್ ಹಂಚಿಕೆ ವಿಚಾರದಲ್ಲಿ ಸುರೇಶ್ ಹಾಗೂ ಆರೋಪಿಗಳ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರಕ್ಕೆ ಆರೋಪಿಗಳು ಸುರೇಶ್‌ನನ್ನು ಉಸಿರುಗಟ್ಟಿಸಿ, ಕತ್ತುಹಿಸುಕಿ ಕೊಲೆ ಮಾಡಿದ್ದರು. ನಂತರ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಬೆಂಗಳೂರಿನಿಂದ ಗೂಡ್ಸ್ ವಾಹನದಲ್ಲಿ ಸುರೇಶ್ ಶವ ತಂದು, ಕೆ.ಎಂ.ದೊಡ್ಡಿ ಸಮೀಪದ ತೊರೆಚಾಕನಹಳ್ಳಿಯ ಶಿಂಷಾ ನದಿಗೆ ಬಿಸಾಡಿ ಪರಾರಿಯಾಗಿದ್ದರು.
ಶಿಂಷಾ ನದಿಯಲ್ಲಿ ಸುರೇಶ್ ಶವ ಪತ್ತೆಯಾಗಿದ್ದರಿಂದ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ಮಾರ್ಗದರ್ಶನದಲ್ಲಿ ಕೆ.ಎಂ.ದೊಡ್ಡಿ ಠಾಣೆ ಇನ್ಸ್ಪೆಕ್ಟರ್ ಎಸ್.ಸಂತೋಷ್ ತಂಡ ಕೊಲೆ ಆರೋಪಿಗಳಿಗಾಗಿ ಬಲೆ ಬೀಸಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿ, ಮದ್ದೂರು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಇದನ್ನು ಓದಿ:ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಿ: ಸಿ.ಟಿ. ರವಿ