ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣ ದಸರಾ: ಈ ಬಾರಿ ಜಂಬೂಸವಾರಿ ರದ್ದು - ಶ್ರೀಚಾಮುಂಡೇಶ್ವರಿ ದೇವಿಯ ಮೂರ್ತಿ ಮೆರವಣಿಗೆ

ಈ ವರ್ಷ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ನಡೆಯುವುದಿಲ್ಲ. ಬದಲಿಗೆ ಸಾರೋಟು ಮಾದರಿಯ ವಾಹನದಲ್ಲಿ ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ಮೂರ್ತಿ ಮೆರವಣಿಗೆ ನಡೆಯಲಿದೆ.

ಶ್ರೀರಂಗಪಟ್ಟಣ ದಸರಾ
ಶ್ರೀರಂಗಪಟ್ಟಣ ದಸರಾ

By

Published : Oct 9, 2021, 1:50 PM IST

ಮಂಡ್ಯ: ದಸರೆಯ ಮೂಲ ನೆಲೆ, ಪಾರಂಪರಿಕ ಹಾಗೂ ಐತಿಹಾಸಿಕ 'ದ್ವೀಪ ಪಟ್ಟಣ' ಶ್ರೀರಂಗಪಟ್ಟಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದಸರಾ ಉತ್ಸವ ನಡೆಯಲಿದೆ. ಆದರೆ ಕೊರೊನಾ ಹಿನ್ನೆಲೆ ಈ ವರ್ಷವೂ ಜಂಬೂ ಸವಾರಿ ರದ್ದುಗೊಂಡಿದ್ದು, ಆದಾಗ್ಯೂ ಎರಡು ಆನೆಗಳು ದಸರಾ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಉತ್ಸವದ ಆಕರ್ಷಣೆ ಹೆಚ್ಚಿಸಲಿವೆ.

ಜಿಲ್ಲಾಡಳಿತದ ಒಂದಿಷ್ಟು ಆಸಕ್ತಿ ಮತ್ತು ಜನರ ಒತ್ತಾಸೆ ಫಲವಾಗಿ 2007 ರಿಂದ ದಸರೆಯ ಮೂಲನೆಲೆ ಶ್ರೀರಂಗಪಟ್ಟಣದಲ್ಲಿ ದಸರಾ ಪುನಾರಂಭಗೊಂಡಿದೆ. ಮೈಸೂರಿನಷ್ಟು ವೈಭವಯುತವಾಗಿ ಇಲ್ಲದಿದ್ದರೂ ಶ್ರೀರಂಗಪಟ್ಟಣ ದಸರಾದಲ್ಲಿ ಯಾವುದೇ ರೀತಿಯ ಸಂಭ್ರಮಕ್ಕೆ ಕೊರತೆ ಇರಲ್ಲ. 2007 ರಿಂದ 2014ರವರೆಗೆ ನಿರಂತರವಾಗಿ ಶ್ರೀರಂಗಪಟ್ಟಣದಲ್ಲೂ ದಸರಾ ನಡೆದಿತ್ತು. ಆದರೆ, ಬರಗಾಲದ ಕಾರಣ 2015, 2016ರ ಲ್ಲಿ ಶ್ರೀರಂಗಪಟ್ಟಣ ದಸರಾ ನಡೆಸಿರಲಿಲ್ಲ.

2017ರಲ್ಲಿ ಅಷ್ಟಾಗಿ ಬರ ಪರಿಸ್ಥಿತಿ ಇಲ್ಲದ ಕಾರಣ ದಸರಾ ಉತ್ಸವವನ್ನು ಪುನಾರಂಭಿಸಲಾಗಿತ್ತು. ಆದರೆ, ಆ ವರ್ಷ ಕಾನೂನಾತ್ಮಕ ತೊಡಕಿನಿಂದ ಜಂಬೂ ಸವಾರಿ ಇಲ್ಲದೆ ದಸರಾ ಸಲ್ಪ ಮಟ್ಟಿಗೆ ಕಳೆಗುಂದಿತ್ತು. ಪರಿಣಾಮ ಜಂಬೂಸವಾರಿ ರಹಿತ, ಸರಳ- ಸಾಂಪ್ರದಾಯಿಕ ದಸರಾ ಆಚರಿಸಲಾಗಿತ್ತು. ಮತ್ತೆ 2018 ಮತ್ತು 2019ರಲ್ಲಿ ವಿಜೃಂಭಣೆಯಿಂದ ನಡೆದು, 2020 ರಲ್ಲಿ ಕೊರೊನಾ ಕಾರಣದಿಂದ ಸರಳ ಮತ್ತು ಸಾಂಕೇತಿಕ ದಸರಾ ನಡೆದಿತ್ತು.

ಈ ವರ್ಷ ಕೊರೊನಾ ಅಬರ ಅಷ್ಟೇನೂ ಇಲ್ಲದಿರುವುದರಿಂದ ತೀರಾ ಸರಳ ಎನ್ನದಿದ್ದರೂ ತಕ್ಕಮಟ್ಟಿಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ದಸರಾ ಆಚರಿಸಲಾಗುತ್ತಿದೆ. ಸರಕಾರದಿಂದ 50 ಲಕ್ಷ ರೂ. ಅನುದಾನವೂ ಬಿಡುಗಡೆಯಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ದಸರಾ ಉತ್ಸವ ಉದ್ಘಾಟನೆಗೆ ಆಹ್ವಾನಿಸಲಾಗಿದೆ.

ಆನೆಬಲ ಸಿಕ್ಕಿದೆ:

ಕೊರೊನಾ ಕಾರಣದಿಂದ 2020ರಲ್ಲಿ ಸರಳವಾಗಿ ನಡೆದ ಶ್ರೀರಂಗಪಟ್ಟಣ ದಸರಾದಲ್ಲಿ ಜಂಬೂಸವಾರಿ ರದ್ದುಗೊಂಡಿತ್ತು. ಬದಲಿಗೆ ಸಾರೋಟು ಮಾದರಿಯ ವಾಹನದಲ್ಲಿ ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ಉತ್ಸವದ ಮೆರವಣಿಗೆ ನಡೆದಿತ್ತು. ಈ ವರ್ಷವೂ ಜಂಬೂಸವಾರಿಗೆ ಅನುಮತಿ ಸಿಕ್ಕಿಲ್ಲ. ಆದರೆ, ದಸರಾ ಉತ್ಸವ ಉದ್ಘಾಟನೆ ವೇಳೆ ಎರಡು ಆನೆಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಂಬೂ ಸವಾರಿ ನಡೆಸಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳು ಪಟ್ಟು ಹಿಡಿದಿದ್ದಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಹಾಗೂ ಆನೆಗಳ ಆರೋಗ್ಯದ ದೃಷ್ಟಿಯಿಂದ ಮೈಸೂರು ದಸರಾದಲ್ಲೇ ಜಂಬೂಸವಾರಿಯನ್ನು ಅರಮನೆ ಅವರಣಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಶ್ರೀರಂಗಪಟ್ಟಣ ದಸರಾ ಉತ್ಸವದ ಮೆರವಣಿಗೆಗೆ ಆನೆಗಳನ್ನು ಕಳುಹಿಸಲಾಗದು. ಬದಲಿಗೆ ದಸರಾ ಉದ್ಘಾಟನೆ ವೇಳೆ ಉತ್ಸವದ ಆಕರ್ಷಣೆಗೆ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬ ಸಂದೇಶವನ್ನು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

ಈ ವರ್ಷ ಜಂಬೂ ಸವಾರಿ ನಡೆಯುವುದಿಲ್ಲ. ಬದಲಿಗೆ ಸಾರೋಟು ಮಾದರಿಯ ವಾಹನದಲ್ಲಿ ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ಮೂರ್ತಿ ಮೆರವಣಿಗೆ ನಡೆಯಲಿದೆ. ಈಗಾಗಲೇ ಮೈಸೂರು ದಸರಾಗಾಗಿ ಬಂದಿರುವ ಆನೆಗಳ ಪೈಕಿ 'ಧನಂಜಯ', ಹೆಣ್ಣಾನೆಗಳ ಪೈಕಿ 'ಚೈತ್ರ ಅಥವಾ ಲಕ್ಷ್ಮಿ' ಹೆಸರಿನ ಆನೆಗಳಲ್ಲಿ ಯಾವುದಾದರೊಂದು ಬರಲಿದೆ.

'ವಿಕ್ರಂ' ಆನೆಗೆ ಈಗಾಗಲೇ ಮದವೇರಿದೆ. ಶುಕ್ರವಾರ 'ಗೋಪಾಲಸ್ವಾಮಿ' ಆನೆಯೂ ಮತ್ತು ಬಂದಂತೆ ವರ್ತಿಸುತ್ತಿತ್ತು. ಹೀಗಾಗಿ ಇವೆರಡೂ ಆನೆಗಳನ್ನು ಕೈಬಿಟ್ಟು 'ಧನಂಜಯ'ನನ್ನು ಶ್ರೀರಂಗಪಟ್ಟಣ ದಸರಾಗೆ ಕರೆಸಲು ನಿರ್ಧರಿಸಲಾಗಿದೆ. ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿರುವ 'ಅಭಿಮನ್ಯು' ಆನೆಯೇ ಶ್ರೀರಂಗಪಟ್ಟಣ ದಸರಾದಲ್ಲಿ ಇಷ್ಟು ವರ್ಷಗಳ ಕಾಲ ಶ್ರೀಚಾಮುಂಡೇಶ್ವರಿ ದೇವಿಯ ಮೂರ್ತಿಯಿದ್ದ ಅಂಬಾರಿ ಹೊರುತ್ತಿತ್ತು.

ABOUT THE AUTHOR

...view details