ಮಂಡ್ಯ: ಈ ಸರ್ಕಾರ ಐದು ವರ್ಷ ಆಡಳಿತದಲ್ಲಿ ಇರುವುದಿಲ್ಲ. ಮುಂದಿನ ಮೇ ತಿಂಗಳ ಒಳಗಾಗಿ ಈ ಸರ್ಕಾರ ಬಿದ್ದು ಹೋಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಕೆಲವು ಕಾರ್ಯಕ್ರಮಗಳಿಂದಾಗಿ ಹಲವು ಸಮಸ್ಯೆ ಉಂಟಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ಇದರ ಜವಾಬ್ದಾರಿಯನ್ನು ಸ್ವತಃ ಹೊತ್ತುಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡಿಸುತ್ತೇನೆ. ಆದ್ದರಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಈ ಸರ್ಕಾರ ಐದು ವರ್ಷ ಆಡಳಿತ ಮಾಡುವುದಿಲ್ಲ. ಮುಂದಿನ ಮೇ ತಿಂಗಳ ಒಳಗಾಗಿ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೆಚ್ಡಿಕೆ ಹೇಳಿದರು. ದೇವೇಗೌಡರು ಬಡವರ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು. ಅವರು ಕೇವಲ 10 ತಿಂಗಳು ಪ್ರಧಾನಮಂತ್ರಿ ಮತ್ತು 18 ತಿಂಗಳು ಮುಖ್ಯಮಂತ್ರಿಯಾಗಿ, ಜೊತೆಗೆ ನೀರಾವರಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಅವರಿಗೆ ತಮ್ಮ ಕನಸನ್ನು ಸಾಕಾರ ಮಾಡಲು ಸಾಧ್ಯವಾಗಲಿಲ್ಲ. ಅವರ ಕನಸನ್ನು ಸಾಕಾರಗೊಳಿಸಲು ಇಂದು ನಾವು ರಾಜಕೀಯದಲ್ಲಿದ್ದೇವೆ. ನಮ್ಮ ಮೇಲೆ ವಿಶ್ವಾಸ ಇಡಿ. ನಾವು ನಾಡಿನ ಜನತೆಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ ಎಂದು ಹೇಳಿದರು.