ಮೈಸೂರು: ಕೋವಿಡ್ ಪರಿಹಾರಕ್ಕಾಗಿ ಅಲೆದು ಅಲೆದು, ಕೋವಿಡ್ನಿಂದ ಮೃತಪಟ್ಟವರ ಕುಟುಂಬಸ್ಥರು ಹೈರಾಣಾಗಿರುವ ಘಟನೆ ಇಲ್ಲಿನ ಗೌಸಿಯಾನಗರದಲ್ಲಿ ಬೆಳಕಿಗೆ ಬಂದಿದೆ. ಕೋವಿಡ್ನಿಂದ ಮೃತಪಟ್ಟ ಮೃತರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಆದರೆ, ಈ ಪರಿಹಾರ ಪಡೆಯಲು ಗೌಸಿಯಾನಗರದ ಹಲವು ಕುಟುಂಬಗಳು ಇಂದಿಗೂ ಪರದಾಡುತ್ತಿವೆ.
ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ, ಹಲವು ತಿಂಗಳು ಕಳೆದಿವೆ. ಆದರೆ, ಅಧಿಕಾರಿಗಳ ವಿಳಂಬ ಧೋರಣೆಯಿಂದ ಅರ್ಜಿ ಹಾಕಿದ ಕುಟುಂಬಸ್ಥರಿಗೆ ಈವರೆಗೂ ಪರಿಹಾರ ದೊರೆತಿಲ್ಲವಂತೆ. ಸರ್ಕಾರದಿಂದ ಸಿಗುವ ಪರಿಹಾರ ಶೀಘ್ರದಲ್ಲಿ ತಲುಪಿಸುವ ವ್ಯವಸ್ಥೆ ಮಾಡುವಂತೆ ಕುಟುಂಸ್ಥರು ಒತ್ತಾಯಿಸಿದ್ದಾರೆ.
ಗೌಸಿಯಾನಗರದಲ್ಲಿ ವಾಸಿಸುವ ಕೆಲವು ಮಂದಿ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಇದರಲ್ಲಿ ಬಹುತೇಕರು ತೀರಾ ಬಡವರು. ಕೆಲವರು ಮೃತಪಟ್ಟು ವರ್ಷ ಕಳೆದಿದೆ. ಕೆಲವರು ಮೃತಪಟ್ಟು ತಿಂಗಳುಗಳು ಉರುಳಿವೆ. ಕೋವಿಡ್ನಿಂದ ಮೃತಪಟ್ಟರೆ ಕೇಂದ್ರ ಸರ್ಕಾರ 50 ಸಾವಿರ ಹಾಗೂ ರಾಜ್ಯ ಸರ್ಕಾರ 1 ಲಕ್ಷ ಪರಿಹಾರ ಘೋಷಿಸಿದೆ. ಆದರೆ, ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಈ ಕುಟುಂಬಸ್ಥರು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.