ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಶುಕ್ರವಾರ ನಾಗಮಂಗಲ ತಾಲೂಕಿನಲ್ಲಿ ಚೌಡಗೋನಹಳ್ಳಿಯಿಂದ ಪ್ರಾರಂಭವಾಗಿ ಚುಂಚನಗಿರಿಗೆ ತಲುಪಿತು.
ಗುರುವಾರ ಚೌಡಗೋನಹಳ್ಳಿ ಬಳಿಯ ಆಯುರ್ವೇದ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರರು ಇಂದು ಬೆಳಗ್ಗೆ 6.30ಕ್ಕೆ ಸಮೀಪದ ಮಲ್ಲೇನಹಳ್ಳಿ ಗ್ರಾಮದಿಂದ ಯಾತ್ರೆ ಆರಂಭ ಮಾಡಿದರು. ಯಾತ್ರೆ ನಾಗಮಂಗಲ ಪಟ್ಟಣ ಪ್ರವೇಶಿಸುತ್ತಿದ್ದಂತೆ ಭಾರೀ ಸಂಖ್ಯೆಯ ಜನತೆ ಪಾದಯಾತ್ರೆಯನ್ನು ಸ್ವಾಗತಿಸಿದರು.
ನಾಗಮಂಗಲ ಪ್ರವಾಸಿ ಮಂದಿರ ವೃತ್ತದ ಮೂಲಕ ಮುನ್ನಡೆದ ರಾಹುಲ್‌ಗಾಂಧಿ ಮತ್ತಿತರರು ಉಪ್ಪಾರಹಳ್ಳಿ ಗೇಟ್ ಬಳಿ ಬೆಳಗಿನ ಉಪಹಾರ ಸೇವಿಸಿ ಕೆಲ ಸಮಯ ವಿಶ್ರಾಂತಿ ಪಡೆದರು. ಮತ್ತೆ 9.30ಕ್ಕೆ ಪಾದಯಾತ್ರೆ ಮುಂದುವರಿಸಿ ತಾಲೂಕಿನ ಅಂಚೆಭೂವನಹಳ್ಳಿ ಬಳಿ ಬೆಳಗ್ಗೆ 10.30ರ ವೇಳೆಗೆ ತಲುಪಿ ವಿಶ್ರಾಂತಿ ಪಡೆದರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನತೆಗೆ ಅಂಚೆ ಭೂವನಹಳ್ಳಿ ಬಳಿ ಊಟ ವಿತರಿಸಲಾಯಿತು. ಸಂಜೆ ಮತ್ತೆ 4 ಗಂಟೆಗೆ ಪಾದಯಾತ್ರೆ ಆರಂಭವಾಗಿ 6.30ರ ವೇಳೆಗೆ ಬೆಳ್ಳೂರು ಚುಂಚನಗಿರಿ ತಲುಪಲಿದ ಬಳಿಕ ಆದಿಚುಂಚನಗಿರಿಗೆ ರಾಹುಲ್ ತೆರಳಿ ರಾತ್ರಿ ವಾಸ್ತವ್ಯ ಹೂಡಿದರು.
ಮಂಡ್ಯದಲ್ಲಿ ಮೂರನೇ ದಿನದ ಜೋಡೋ ಯಾತ್ರೆ ಮಾರ್ಗ ಮಧ್ಯೆ ಬರುವ ಹಳ್ಳಿಗಳ ಜನತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಾಹುಲ್ ಗಾಂಧಿಯವರನ್ನು ನೋಡಲು ಮುಗಿಬಿದ್ದರು. ಈ ವೇಳೆ ವೃದ್ಧರು, ವೃದ್ದ ಮಹಿಳೆಯರನ್ನು ಕಂಡ ರಾಹುಲ್ ಅವರನ್ನು ತಮ್ಮ ಬಳಿಗೆ ಕರೆದು ಮಾತನಾಡಿಸಿ ಮುನ್ನಡೆದರು. ಕೆಲ ಯುವತಿಯರು ರಾಹುಲ್‌ರೊಂದಿಗೆ ಹೆಜ್ಜೆ ಹಾಕಿ ಸೆಲ್ಫಿ ತೆಗೆಸಿಕೊಂಡರು. ನಗು ನಗುತ್ತಲೇ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ನೀಡಿದ ರಾಹುಲ್ ಅವರನ್ನೂ ತಮ್ಮೊಡನೆ ಕರೆದುಕೊಂಡು ಪಾದಯಾತ್ರೆ ಮುಂದುವರಿಸಿದರು.
ಶುಕ್ರವಾರವೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ರಾಹುಲ್ ಆಗಮಿಸುವ ವೇಳೆ ನಾಗಮಂಗಲ ಪಟ್ಟಣದಲ್ಲಿ ಭಾರೀ ಜನಸಮೂಹವೇ ನೆರೆದಿತ್ತು. ಭಾರತ್ ಜೋಡೋ ಯಾತ್ರೆಯ ಟೀಶರ್ಟ್ ಧರಿಸಿದ್ದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಹಿಡಿದು ರಾಹುಲ್ ಪರ ಘೋಷಣೆ ಕೂಗುತ್ತಾ ಸಾಗಿದರು. ರಸ್ತೆಯ ಎರಡೂ ಕಡೆ ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ಗಳು ಹಾರಾಡುತ್ತಿದ್ದರೆ, ಕಾಂಗ್ರೆಸ್ ನಾಯಕರ ಕಟೌಟ್‌ಗಳು, ಬೃಹದಾಕಾರದ ಪ್ಲೆಕ್ಸ್‌ಗಳು, ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿದ್ದವು. ಮೂರ್ನಾಲ್ಕು ಕಿ.ಮೀ. ದೂರದವರೆಗೆ ಜನರು ಪಾದಯಾತ್ರೆಯಲ್ಲಿ ನಡೆದರು.
ಟಿಪ್ಪು ಸುಲ್ತಾನ್, ಕುವೆಂಪು ಪುಸ್ತಕ ವಿತರಣೆ:ಮಂಡ್ಯದ ನಾಗಮಂಗಲ ವಕೀಲರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಿದರು. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಫೋಟೊ ಜೊತೆಗೆ ಟಿಪ್ಪು ಸುಲ್ತಾನ್, ಕುವೆಂಪು ಪುಸ್ತಕ ಕೊಟ್ಟಿದ್ದಾರೆ. ಯಾತ್ರೆ ನಾಗಮಂಗಲಕ್ಕೆ ಪ್ರವೇಶಿಸುತ್ತಿದ್ದಂತೆ ಭಾರತ್ ಜೋಡೋ ಯಾತ್ರೆ ಕೀ ಜೈ, ರಾಹುಲ್ ಗಾಂಧಿ ಕೀ ಜೈ ಎಂದು ಜೈಕಾರಗಳು ಮೊಳಗಿದವು.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಇಂದಿರಾ - ಕವಿತಾ ಲೋಕೇಶ್