ಮಂಡ್ಯ: 2024ರ ಮಂಡ್ಯ ಲೋಕಸಭಾ ಚುನಾವಣೆಯಲ್ಲೂ ನಾನು ಸ್ಪರ್ಧೆ ಮಾಡಲ್ಲ. ಮಂಡ್ಯದಿಂದ ನಮ್ಮ ಕಾರ್ಯಕರ್ತನೋರ್ವನನ್ನು ಕಣ್ಣಕ್ಕಿಳಿಸುತ್ತೇವೆ. ಕಾರ್ಯಕರ್ತನನ್ನು ನಾವೆಲ್ಲರೂ ಸೇರಿ ಗೆಲ್ಲಿಸುತ್ತೇವೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದರು.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಸದ್ಯ ರಾಮನಗರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಜನರ ಇಚ್ಛೆಯಂತೆ ನಾನು ರಾಮನಗರದಲ್ಲಿ ಸ್ಪರ್ಧೆ ಮಾಡ್ತಾ ಇದೀನಿ. ಮಂಡ್ಯದಲ್ಲೂ ಜನರ ಇಚ್ಛೆ ಇದೆ. ಮಂಡ್ಯದ ಜನರಿಗೆ ನಾನು ಅಭಾರಿಯಾಗಿದ್ದೇನೆ ಎಂದರು. ಚನ್ನಪಟ್ಟಣದಿಂದ ರಮ್ಯಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣದಿಂದ ರಮ್ಯಾ ಸ್ಪರ್ಧೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಸಿನಿಮಾ ರಂಗದಲ್ಲಿ ರಮ್ಯಾ ಅವರು ನನಗೆ ಆತ್ಮೀಯರು. ನನ್ನ ಪ್ರಕಾರ ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲ್ಲ. ಇದು ಕೇವಲ ಸೃಷ್ಟಿ ಅಷ್ಟೇ ಎಂದು ತಿಳಿಸಿದ್ದಾರೆ.
ನಾನು ಆ ತಾಯಿ ಬಗ್ಗೆ ನಾನು ಮಾತನಾಡಲ್ಲ: ನಾನು ಆ ತಾಯಿ ಬಗ್ಗೆ ನಾನು ಮಾತನಾಡಲ್ಲ ಎಂದು ಸಂಸದೆ ಸುಮಲತಾರನ್ನ ತಾಯಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ನಾಯಕರು ಕಿಡಿಕಾರಿದ್ರು. ಆದ್ರೆ ಇದೀಗಾ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಸುಮಲತಾರನ್ನ ತಾಯಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿಖಿಲ್ ಇಮ್ಮೇಚುರ್ ಎಂದಿದ್ದ ಸುಮಲತಾ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ಆ ಮಹಾತಾಯಿ ಬಗ್ಗೆ ನಾನು ಎಂದೂ ಮಾತನಾಡಲ್ಲ. ಈ ಹಿಂದೆ ಚುನಾವಣೆಯಲ್ಲೂ ನಾನು ಮಾತನಾಡಿಲ್ಲ. ಈಗಲೂ ಸಹ ಅವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.
ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಸ್ಪರ್ಧೆ ವಿಚಾರ ಮಾತನಾಡಿ, ಕುಮಾರಣ್ಣ ಎಷ್ಟು ಕಡೆ ಸ್ಪರ್ಧೆ ಮಾಡ್ತಾರೆ? 2018 ರಲ್ಲಿ ಕುಮಾರಣ್ಣ ಸ್ಪರ್ಧೆ ಮಾಡ್ತಿದ್ರು. ಬಳಿಕ ಚನ್ನಪಟ್ಟಣದಲ್ಲಿ ನಿಂತು ಗೆದ್ರು. ಅಭಿವೃದ್ಧಿ ಕೆಲಸ ನೋಡಿದ್ದಿರಿ. ಚನ್ನಪಟ್ಟಣ ಬಿಟ್ಟು ಬೇರೆ ಎಲ್ಲೂ ಕುಮಾರಣ್ಣ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ವಿರುದ್ಧ ಕಿಡಿ: ಬಿಜೆಪಿಯ ಬಿ ಟೀಮ್ ಅಂತ ಇದ್ರೆ ಅದು ಕಾಂಗ್ರೆಸ್ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ವಾಗ್ದಾಳಿ ನಡೆಸಿದ್ದಾರೆ. ಕುಮಾರಣ್ಣ 26 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ್ರು. ದೇಶದಲ್ಲಿ ರೈತರ ಪರ ಇರುವ ಏಕೈಕ ಸಿಎಂ ಅಂದ್ರೆ ಅದು ಕುಮಾರಸ್ವಾಮಿ. ಕೇವಲ 14 ತಿಂಗಳಲ್ಲಿ ಕುಮಾರಣ್ಣ ರಾಜ್ಯಕ್ಕೆ ಒಳ್ಳೆ ಕೊಡುಗೆ ಕೊಟ್ಟರು. ಬಳಿಕ ಸರ್ಕಾರವನ್ನು ಕುತಂತ್ರದಿಂದ ಕೆಡವಿದ್ರು. ಬಿಜೆಪಿ ಅವರು ಆಡಳಿತಕ್ಕೆ ಬಂದು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು.? ಶೇ 40ರಷ್ಟು ಲೂಟಿ, ಪಿಎಸ್ಐ ಹಗರಣ, ಹಗರಣದಲ್ಲಿ ಮುಳುಗಿರುವ ಸರ್ಕಾರ ಬಿಜೆಪಿ ಸರ್ಕಾರ ಎಂದರು.