ಮಂಡ್ಯ:ಸಾವರ್ಕರ್ ವಿಚಾರವಾಗಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿಂತಿದ್ದು, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಂಧನಕ್ಕೆ ಒಳಗಾದ ಸಾವರ್ಕರ್ ಬ್ರಿಟಿಷ್ ಅಧಿಕಾರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಸಾಕ್ಷಿ ಇದೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾವರ್ಕರ್ ಬಂಧನ ನಂತರ ಬ್ರಿಟಿಷ್ ಅಧಿಕಾರಿಗಳಿಗೆ ಬರೆದ ಪತ್ರಗಳು ಇವೆ. ಆ ಸಾಕ್ಷಿಗಳೇ ಸಾಕು. ನೀವೇ ಈ ದೇಶ ಆಳ್ವಿಕೆ ಮಾಡಲು ಸೂಕ್ತ ಎಂದು ಪತ್ರ ಬರೆದಿದ್ದರು ಎಂದು ಹೇಳಿದರು.
ಜೆಡಿಎಸ್ ಬಿಜೆಪಿ ಜೊತೆಯೂ ಹೋಗಿದೆ: ಜೆಡಿಎಸ್ ನಾಯಕರು ಬಿಜೆಪಿ ಜೊತೆ ಹೊಂದಾಣಿಕೆಯನ್ನೂ ಮಾಡಿಕೊಂಡಿದ್ದಾರೆ, ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಆ ಪಕ್ಷದ ವರಿಷ್ಠರು ತಮ್ಮ ನಿರ್ಧಾರವನ್ನು ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡರನ್ನು ಕೇಳಿ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.
ನಮ್ಮದು ದ್ವೇಷದ ರಾಜಕಾರಣ ಮಾಡುವ ಪಕ್ಷವಲ್ಲ. ಸಮಾಜದಲ್ಲಿ ಹಿಂದುಳಿದ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ. ಬಿಜೆಪಿ ರೀತಿಯಲ್ಲಿ ದ್ವೇಷ ಬಿತ್ತುವುದಿಲ್ಲ. ಕಾಂಪ್ರಮೈಸ್ ರಾಜಕಾರಣವನ್ನೂ ಮಾಡುವುದಿಲ್ಲ ಎಂದರು.