ಮಂಡ್ಯ:ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ವಿವಾದ ಹೈಕೋರ್ಟ್ ಅಂಗಳದಲ್ಲಿ ಮಂದಿರವೋ ಅಥವಾ ಮಸೀದಿಯೋ ಇತ್ಯರ್ಥಕ್ಕೆ ಕೊನೆಯ ಸಿದ್ಧತೆಗಳು ನಡೆದಿದೆ. ಇನ್ನೆರಡು ದಿನಗಳಲ್ಲಿ ಹೈಕೋರ್ಟ್ನಲ್ಲಿ 108 ಹನುಮ ಭಕ್ತರು ದಾವೆ ಹೂಡಲಿದ್ದಾರೆ.
ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಜಾಮಿಯಾ ಮಸೀದಿಯಲ್ಲ, ಹನುಮ ಮಂದಿರ ಎಂದು ಹೋರಾಟ ನಡೆಸಿತ್ತು. ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದವು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಕೋರ್ಟ್ ಮೊರೆ ಹೋಗಲಾಗಿದೆ.
ಭಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಅವರು ಮಾತನಾಡಿದರು ಅಯೋಧ್ಯೆ ಶ್ರೀರಾಮ ಮಂದಿರ ರೀತಿ ಹನುಮ ಮಂದಿರಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಲು ಕೊನೆಯ ಹಂತದ ತಯಾರಿಗಳು ಸಹ ಇದೀಗ ಮುಕ್ತಾಯಗೊಂಡಿವೆ. 108 ಹನುಮ ಭಕ್ತರಿಂದ ಹೈಕೋರ್ಟ್‍ಗೆ ದಾವೆ ಹೂಡಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಕೀಲ ರವಿಶಂಕರ್ ಮೂಲಕ ದಾವೆ ಹೂಡಲು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ದಾಖಲಾತಿಗಳನ್ನು ಭಜರಂಗ ಸೇನೆ ಸಿದ್ಧಪಡಿಸಿಕೊಂಡಿದೆ. ದಾಖಲೆ ಸಮೇತ ಕೋರ್ಟ್ ಮೆಟ್ಟಿಲೇರಲು ಭಜರಂಗಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಂದೂಗಳ ಮಂಗಳಕರ ಸಂಖ್ಯೆ ಎಂಬ ಕಾರಣಕ್ಕೆ 108 ಪಿಐಎಲ್ ಸಲ್ಲಿಕೆ ಮಾಡಲಾಗುತ್ತಿದೆ. ಇದರಲ್ಲಿ ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.
ಓದಿ:ಶ್ರೀರಂಗಪಟ್ಟಣ ಮಸೀದಿ ವಿವಾದ: ಅಲ್ಲಿ ದೇವಾಲಯ ಇತ್ತು ಅನ್ನೋದಕ್ಕೆ ಈ ಪುಸ್ತಕವೇ ಸಾಕ್ಷಿ?