ಮಂಡ್ಯ: ಪ್ರೀತಿ ಮಾಡಿದ್ದಕ್ಕಾಗಿ ಯುವತಿ ಮನೆಯವರು ಯುವಕನನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಕಲ್ಲಹಳ್ಳಿಯ ದರ್ಶನ್ (17) ಮೃತ ಯುವಕ. ಅದೇ ಬಡಾವಣೆಯ ಯುವತಿಯೊಬ್ಬಳನ್ನು ಈತ ಪ್ರೀತಿಸುತ್ತಿದ್ದ. ಈ ಕಾರಣಕ್ಕೆ ಯುವತಿ ಮನೆಯವರು ನಿನ್ನೆ ದರ್ಶನ್ನನ್ನು ಮನೆಗೆ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಯುವತಿಯ ತಂದೆ ಕಲ್ಲಹಳ್ಳಿ ಶಿವಲಿಂಗು ಎಂಬವರು ಹಲ್ಲೆ ಮಾಡಿದ್ದು, ಇವರು ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಗಾಯಾಳು ಯುವಕನನ್ನು ನಿನ್ನೆ ಮುಂಜಾನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾದಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ದರ್ಶನ್ ಮೃತಪಟ್ಟಿದ್ದಾನೆ.
ಈ ಘಟನೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತನ ಸಂಬಂಧಿಕರು ಆರೋಪಿ ಶಿವಲಿಂಗುನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಧರಣಿ ಮಾಡಲು ನಿರ್ಧರಿಸಿದ್ದಾರೆ.