ಮಂಡ್ಯ: ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿರುವ ಭತ್ತ, ರಾಗಿ ದಾಸ್ತಾನುಗಳ ತಪಾಸಣೆ ಮಾಡಿ ಹಾಗೂ ಖರೀದಿ ಪ್ರಕ್ರಿಯೆ ಸಂಬಂಧ ರೈತರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 2020-21ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಸಂಬಂಧ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿರುವ ಖರೀದಿ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಸಾಗಬೇಕು. ಈಗಾಗಲೇ ಭತ್ತ, ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಸರ್ಕಾರದಿಂದ ರೈತರಿಗೆ ನಿಗದಿ ಪಡಿಸಿದ ಖರೀದಿ ಮಿತಿಯನ್ನು ಸಡಿಲಗೊಳಿಸಿದ್ದು, ಪ್ರತಿ ಎಕರೆಗೆ ಭತ್ತಕ್ಕೆ 25 ಕ್ವಿಂಟಲ್ ಮತ್ತು ರಾಗಿಗೆ 10 ಕ್ವಿಂಟಲ್ನಂತೆ ಗರಿಷ್ಠ ಮಿತಿ ಇಲ್ಲದಂತೆ ಖರೀದಿಸಲಾಗುವುದು. ಈಗಾಗಲೇ ನೋಂದಾಯಿಸಿಕೊಂಡಿರುವ ರೈತರು ಮತ್ತೊಮ್ಮೆ ನೋಂದಾಯಿಸಿಕೊಂಡು ರಾಗಿ ಮತ್ತು ಭತ್ತ ಸರಬರಾಜು ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಲು ಅವರು ಕೋರಿದರು.