ಮಂಡ್ಯ: ಮದ್ದೂರು ತಾಲೂಕಿನ ನವಿಲೆ ಗ್ರಾಮದ ವಕೀಲ, ಬಿಎಸ್‌ಪಿ ಮುಖಂಡ ಎನ್ ಕೆ ರವೀಂದ್ರ (45) ಶನಿವಾರ ಸಂಜೆ ಅನುಮಾನಾಸ್ಪದ ರೀತಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಶಿಂಷಾ ನದಿ ತಟದಲ್ಲಿರುವ ಜಮೀನಿಗೆ ಅವರು ನಿನ್ನೆ ಮಧ್ಯಾಹ್ನ ತೆರಳಿದ್ದರು. ಸೇತುವೆ ಸಮೀಪದಲ್ಲೇ ಅವರ ತೆಗೆದುಕೊಂಡು ಹೋಗಿದ್ದ ಬೈಕ್ ಮತ್ತು ಚಪ್ಪಲಿ ಪತ್ತೆಯಾಗಿವೆ.
ಅನುಮಾನಗೊಂಡು ಕುಟುಂಬಸ್ಥರು ಹುಡುಕಿದ ಸಂದರ್ಭದಲ್ಲಿ ಶಿಂಷಾ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಪಿಲ್ಲರ್ ಕೆಳಗಿನ ಗುಂಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಬಹಳ ಕಿರಿದಾದ ಜಾಗದಲ್ಲಿ ಮೃತದೇಹ ಇರುವ ಕಾರಣ ರಾತ್ರಿ ಶವ ಮೇಲೆತ್ತಲು ಸಾಧ್ಯವಾಗಿಲ್ಲ.
ರವೀಂದ್ರ ಬಿಎಸ್‌ಪಿಯಿಂದ ಮದ್ದೂರು ವಿಧಾನಸಭಾ ಚುನಾವಣೆಗೆ ಒಮ್ಮೆ ಸ್ಪರ್ಧಿಸಿ ಸೋಲು ಕಂಡಿದ್ದರು. ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದ ಅವರು ಕಾನೂನು ನೆರವು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.