ಮಂಡ್ಯ:ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಬೇಕು. ಚುನಾವಣೆಗೆ ಯಾರೂ ತಯಾರಿ ಮಾಡಿಕೊಂಡಿಲ್ಲ. ಯಾವುದಾದರು ಒಂದು ಸ್ಥಿರ ಸರ್ಕಾರ ಇದ್ದರೆ ಉತ್ತಮ. ನಮಗೆ ಯಾರು ಸಹಕಾರ ನೀಡ್ತಾರೋ ಅವರಿಗೆ ನಾವು ಸಹಾಯ ಮಾಡೋಣ ಅನ್ನೋದು ನಮ್ಮ ಪಕ್ಷದ ಚಿಂತನೆ ಎಂದು ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಮಲೇಷ್ಯಾಗೆ ಹೋಗಿಲ್ಲ. ಕ್ಷೇತ್ರದಲ್ಲೇ ಇದ್ದೇನೆ. ಬಿಜೆಪಿಗೆ ಹೋಗಲು ಯಾವ ಶಾಸಕರೂ ಸಿದ್ಧರಿಲ್ಲ. ಒಂದೊಮ್ಮೆ ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಳ‍್ಳಬೇಕಾದರೆ ನಮ್ಮ ನಾಯಕರು ತೀರ್ಮಾನ ತೆಗೆದುಕೊಳ‍್ಳುತ್ತಾರೆ. ನನಗೆ ಮೈಸೂರಿನ ಜೆಡಿಎಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲು ಅಭ್ಯಂತರ ಇಲ್ಲ. ಆದರೆ ಅವರು ದಾಳಿ ಮಾಡಿದ, ಆಯ್ಕೆ ಮಾಡಿದ ಸಂದರ್ಭ ನೋಡಿದರೆ ಇದು ರಾಜಕೀಯ ಷಡ್ಯಂತ್ರ ಎಂಬುದು ಗೊತ್ತಾಗುತ್ತಿದೆ. ಅವರನ್ನು ಹತೋಟಿಗೆ ತರಲು, ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು, ಒಬ್ಬರಿಗೆ ಒಂದು ಕಾನೂನಾ? ಎಲ್ಲರಿಗೂ ಒಂದೇ ಕಾನೂನು ಇರಬೇಕು. ರಾಜಕಾರಣದಲ್ಲಿ ಬಂದವರೆಲ್ಲಾ ಅಕ್ರಮ ಆಸ್ತಿ ಮಾಡಿಲ್ಲ . ಅವರೆಲ್ಲಾ ಇಡಿ, ಐಟಿ ದೃಷ್ಟಿಯಲ್ಲಿ ಶುದ್ಧ ಹಸ್ತರು. ಒಂದೇ ಕಾನೂನು ಒಪ್ಪೋಣ. ಮಂತ್ರಿ ಆದರೆ ಸಾಕಪ್ಪ 10ರಿಂದ 20ರಷ್ಟು ಆಸ್ತಿ ಹೆಚ್ಚಾಗುತ್ತದೆ ಎಂದು ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದರು.