ಮಂಡ್ಯ ಕ್ಷೇತ್ರಕ್ಕೂ ಸಿನಿಮಾ ಕ್ಷೇತ್ರಕ್ಕೂ ಭಾರೀ ನಂಟು ಇದೆ. ಸಕ್ಕರೆ ನಾಡಿನಿಂದ ರೆಬಲ್ ಸ್ಟಾರ್ ಅಂಬರೀಶ್ ಮೂರು ಬಾರಿ (1998, 1999 ಜನತಾ ದಳದಿಂದ, 2004 ರಲ್ಲಿ ಕಾಂಗ್ರೆಸ್ ಪಕ್ಷದಿಂದ) ಆಯ್ಕೆ ಆಗಿದ್ದರು. 2013 ಲೋಕಸಭಾ ಉಪ ಚುನಾವಣೆಯಲ್ಲಿ ನಟಿ ರಮ್ಯ ಸಂಸದರಾಗಿ ಆಗಿದ್ದರು. ಸಿನಿಮಾ ಕ್ಷೇತ್ರದಿಂದಲೇ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸಂಸದರಾಗಿ ಆಯ್ಕೆಯಾದ ಮೂರನೇ ವ್ಯಕ್ತಿ ಹಾಗೂ ಎರಡನೇ ಮಹಿಳಾ ಸಂಸದೆ.
ಸಿನಿಮಾ ಕ್ಷೇತ್ರದಿಂದ ಡಾ. ಅಂಬರೀಶ್ ಅವರ ಪ್ರಭಾವವೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಎನ್ನಬಹುದು. ಲೋಕಸಭಾ ಸದಸ್ಯರಾಗಿ ಕಾವೇರಿ ವಿಚಾರ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಇದೀಗ ಅವರ ಪತ್ನಿ ಸುಮಲತಾ ಅಂಬರೀಶ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಂಬರೀಶ್ ನಿಧನದಿಂದ ಜನರು ಸುಮಲತಾ ಮೇಲೆ ಒಲವು ತೋರಿದ್ದು, ಸುಮಲತಾ ಅಂಬರೀಶ್ ಅವರು ಪ್ರಚಾರದ ವೇಳೆ ಸೆರಗು ಒಡ್ಡಿ ಮತದಾರರಲ್ಲಿ ಕೇಳಿಕೊಂಡ ರೀತಿ, ದರ್ಶನ್, ಯಶ್, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸುಮಲತಾ ಬೆನ್ನಿಗೆ ನಿಂತದ್ದು ಅಥವಾ ಯಾರು ತಮ್ಮ ಬಗ್ಗೆ ಏನು ಮಾತನಾಡಿದರೂ ಅದಕ್ಕೆ ತಿರುಗಿ ಮಾತನಾಡದೇ, ಕಟುವಾದ ಟೀಕೆಗಳಿಗೆ ಅವರಂತೆಯೇ ಉತ್ತರ ನೀಡದಿದ್ದದ್ದು ಒಟ್ಟಿನಲ್ಲಿ ಈ ಎಲ್ಲಾ ಅಂಶಗಳು ಅವರ ಗೆಲುವಿಗೆ ಕಾರಣವಾಯಿತು ಎನ್ನಬಹುದು.