ಮಂಡ್ಯ:ನಾನು ಹೊಸ ಕ್ಷೇತ್ರ ಹುಡುಕುತ್ತಿದ್ದೇನೆ ಎಂಬುದು ಯಾರದೋ ಕನಸು, ನನಗೆ ಹೊಸ ಕ್ಷೇತ್ರದ ಅವಶ್ಯಕತೆ ಇಲ್ಲ, ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕಾಗಿ, ಬೇಕಾದ್ರೆ ರಾಜಕೀಯ ಬಿಡ್ತೀನಿ, ಆದ್ರೆ ಮಂಡ್ಯ ಬಿಡಲ್ಲ ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದ್ದಾರೆ.
ಮದ್ದೂರು ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಮುಂದಿನ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬ ಬಗ್ಗೆ ಯೋಚನೆ ಮಾಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ, ಎಲ್ಲಾ ಪಕ್ಷಗಳಲ್ಲಿರುವ ಕೆಲವು ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ. ಹಾಗಾಗಿ ಯಾರಿಗೆ ಬೆಂಬಲ ನೀಡುವುದು? ಅದಕ್ಕಿಂತ ಸುಮ್ಮನಿರುವುದೇ ಒಳ್ಳೆಯದು ಎನಿಸುತ್ತದೆ ಎಂದರು.
ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ಅಭಿಷೇಕ್ ರಾಜಕೀಯಕ್ಕೆ ಬರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿಷೇಕ್ ಅಂಬರೀಶ್ ಸಧ್ಯ ಸಿನಿಮಾ ಮಾಡಿಕೊಂಡಿದ್ದಾರೆ. ಅವರ ರಾಜಕೀಯ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆ ಅವರನ್ನೇ ಪ್ರಶ್ನಿಸಬೇಕು. ಇನ್ನು ನಮ್ಮ ಬಗ್ಗೆ ಮಾತಾಡಿದ್ರೆ ಕೆಲವರಿಗೆ ಪ್ರಚಾರ ಸಿಗುತ್ತೆ, ಹಾಗಾಗಿ ಅವರು ಮಾತನಾಡುತ್ತಾರೆ. ಆದರೆ ನಾನೆಂದೂ ಅವರ ಬಗ್ಗೆ ಮಾತನಾಡುವುದಿಲ್ಲ, ಸುದ್ದಿಗಾರರು ಪ್ರಶ್ನಿಸಿದಾಗ ಮಾತ್ರ ನಾನು ಪ್ರತಿಕ್ರಿಯಿಸುತ್ತೇನೆ ಅಷ್ಟೇ ಎಂದು ಸುಮಲತಾ ಹೇಳಿದರು.
ಜಿಲ್ಲೆಯ ಕೆಲವು ರಾಜಕಾರಣಿಗಳು ರಾಜಕೀಯದಲ್ಲಿ ನನಗಿಂತ ಸೀನಿಯರ್ ಇದ್ದಾರೆ, ಅವರೇಕೆ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ:ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಯಾವುದೇ ಸಂಬಂಧವಿಲ್ಲ: ಸಚಿವ ಅಶ್ವತ್ಥ ನಾರಾಯಣ ಸ್ಪಷ್ಟನೆ