ಮಂಡ್ಯ: ಮಂಡ್ಯದಲ್ಲಿ ಒಂದೆಡೆ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಮತ್ತೊಂದೆಡೆ ಮನ್ಮುಲ್ ಹಗರಣದ ವಿಚಾರವಾಗಿಯೂ ಹೋರಾಟಕ್ಕೆ ಧುಮುಕಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರಿಗೆ ಸಾಥ್ ನೀಡುವ ಜೊತೆಗೆ ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಟಾಂಗ್ ನೀಡಿದ್ರು.
ಅಕ್ರಮ ಗಣಿಗಾರಿಕೆ ವಿರುದ್ಧ ಸಮರ - ಮನ್ಮುಲ್ ಹಗರಣ ವಿರುದ್ಧದ ಹೋರಾಟಕ್ಕೂ ಸಂಸದೆ ಸುಮಲತಾ ಸಾಥ್ ಕೆಲವು ದಿನಗಳಿಂದ ಅಕ್ರಮ ಗಣಿಗಾರಿಕೆಯ ಸುದ್ದು ಜೋರಾಗಿದೆ. ಈ ನಡುವೆ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಕುರಿತು ಸುಮಲತಾ ಧ್ವನಿ ಎತ್ತಿದ್ದು, ರೈತರೊಂದಿಗೆ ಪ್ರತಿಭಟನೆಗಿಳಿದಿದ್ದಾರೆ.
ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ:
ಹಾಲಿಗೆ ನೀರು ಮಿಶ್ರಣ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ರೈತ ಸಂಘಟನೆ ನಿನ್ನೆ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಪಾಲ್ಗೊಂಡಿದ್ರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತು ಆರಂಭಿಸಿದ ಅವರು ಮಂಡ್ಯದ ಸ್ವಾಭಿಮಾನಿ ಜನಕ್ಕೆ ನನ್ನ ನಮಸ್ಕಾರ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯನ್ನು ನೆನಪಿಸಿದ್ರು.
ರೈತರ ಹೋರಾಟಕ್ಕೆ ಸುಮಲತಾ ಬೆಂಬಲ:
ಮನ್ಮುಲ್ ಹಗರಣದ ಬಗ್ಗೆ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ತನಿಖೆಯಿಂದ ಸತ್ಯ ಹೊರಬರಬೇಕು ಎಂದ ಸುಮಲತಾ, ನಿಮ್ಮ ಹೋರಾಟಕ್ಕೆ ಬೆಂಬಲವಾಗಿ ನಾನಿದ್ದೇನೆ. ನನಗೆ ಶಕ್ತಿ ನೀಡಿ ಎಂದರು.
'ಸಾವಿನ ಮನೆಗೆ ಹೋಗಿ ಕಾಸು ಕೊಟ್ಟು ಪಬ್ಲಿಸಿಟಿ ತಗೊಳ್ತಾರೆ'
ಇನ್ನು ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿ, ನಾನು ಪಾರ್ಲಿಮೆಂಟ್ನಲ್ಲಿದ್ದಾಗ ಸುಮಲತಾ ಕಾಣಲಿಲ್ಲ ಅಂತಾರೆ. ಇಲ್ಲಿಗೆ ಬಂದ್ರೆ ನನ್ನ ವಿರುದ್ಧ ಹೋರಾಟ ಮಾಡ್ತಾರೆ. ಸಾವಿನ ಮನೆಗೆ ಹೋಗಿ ಒಂದಿಷ್ಟು ಕಾಸು ಕೊಟ್ಟು ಪಬ್ಲಿಸಿಟಿ ತಗೊಳ್ತಾರೆ ಎಂದು ಟಾಂಗ್ ನೀಡಿದ್ರು, ಇಷ್ಟಲ್ಲದೇ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವ್ರಿಗೂ ಪರೋಕ್ಷವಾಗಿ ಟಾಂಗ್ ನೀಡಿದ್ರು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ನನಗೆ ಯಾರೂ ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಲಿಲ್ಲ ಅಂತಾರೆ. ನೀವು ಯಾಕೆ ಅಕ್ರಮದ ಬಗ್ಗೆ ಹೇಳಲಿಲ್ಲ ಅಂತ ಜನ್ರನ್ನ ಪ್ರಶ್ನೆ ಮಾಡಿದ್ರು.
ಶಾಸಕ ಸುರೇಶ್ ಗೌಡ ಏನಂದ್ರು?
ಇನ್ನೂ ಮದ್ದೂರಿನ ಕೊಪ್ಪದಲ್ಲಿ ಮಾತನಾಡಿರುವ ಜೆಡಿಎಸ್ ಶಾಸಕ ಸುರೇಶ್ ಗೌಡ, ಸುಮಲತಾ ದೊಡ್ಡವರು, ತಾಯಿ ಸಮಾನರು. ನಮ್ಮ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕು. ನಾವು ಮಂಡ್ಯದವ್ರು ಸ್ವಲ್ಪ ಒರಟು, ಆದ್ರೆ ನಮ್ಮ ಹೃದಯ ಮೃದು. ಅಂಬರೀಶ್ ಅವ್ರ ಒರಟಾಗಿ ಮಾತನಾಡ್ತಿರ್ಲಿಲ್ವ ಎಂದಿದ್ದಾರೆ.
ಇನ್ನು ಕೆ.ಆರ್.ಎಸ್ ಡ್ಯಾಂ ಹಾಗೂ ಬೇಬಿ ಬೆಟ್ಟಕ್ಕೆ ಸಂಸದೆ ಸುಮಲತಾ ಭೇಟಿ ನೀಡಲಿದ್ದು, ಗಣಿಗಾರಿಕೆ ವಿಚಾರವಾಗಿಟ್ಟುಕೊಂಡು ಜೆಡಿಎಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.