ಮಂಡ್ಯ :ಮನ್‌ಮುಲ್ ಹಗರಣ ಬಗ್ಗೆ ಮಾಹಿತಿ ಪಡೆದ ಮೇಲೆ ದಿಗ್ಭ್ರಮೆ ಆಯ್ತು. ಆದ್ರೆ, ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ನನ್ನ ಹೋರಾಟ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ಮಂಡ್ಯದ ಗೆಜ್ಜೆಲಗೆರೆಯ ಮನ್‌ಮುಲ್ ಹಗರಣದ ವಿರುದ್ಧ ಹಾಲು ಉತ್ಪಾದಕರ ಪ್ರತಿಭಟನೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿ ರೈತರ ಹೋರಾಟಕ್ಕೆ ಸಾಥ್ ನೀಡಿದ್ರು. ಮನ್‌ಮುಲ್ ಹಗರಣ ಸಿಬಿಐಗೆ ವಹಿಸುವಂತೆ ರೈತರ ಒತ್ತಾಯಕ್ಕೆ ಬೆಂಬಲ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅಂಬರೀಶ್ ಹೆಸರನ್ನ ಅಕ್ರಮ ಗಣಿಗಾರಿಕೆಯಲ್ಲಿ ಎಳೆದು ತಂದ್ರಲ್ಲಾ ಎಂದು ಖಾರವಾಗಿ ದಳಪತಿಗಳ ಮೇಲೆ ಹರಿಹಾಯ್ದರು. ಅಂಬರೀಶ್ ಪಾರ್ಥಿವ ಶರೀರ ತಂದೆವು ಎನ್ನುವುದಕ್ಕೂ ಅಕ್ರಮ ಗಣಿಗಾರಿಕೆಗೂ ಏನು ಸಂಬಂಧ.? ಎಂದು ಪ್ರಶ್ನೆ ಮಾಡಿದರು.
ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ಜೆಡಿಎಸ್‌ನವರಿಗೆ ಈಗ ಪ್ರತಿಭಟನೆ ಮಾಡುವುದೇ ಇಂಪಾರ್ಟೆಂಟ್ :ರೈತರಿಗೆ, ಬಡ ಜನರಿಗೆ ಬೇಕಾಗಿರುವುದು ಇವರಿಗೆ ಬೇಕಾಗಿಲ್ಲ, ನೀವು ಭ್ರಷ್ಟಾಚಾರ ಸಮರ್ಥನೆ ಮಾಡುತ್ತಿದ್ದರೆ ರೈತರ ಜೀವನ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ? ನನ್ನ ವಿರುದ್ಧ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡ್ತಿದ್ದಾರೆ. ಪಾಪ ಈಗ ಅದು ಇಂಪಾರ್ಟೆಂಟ್ ಎಂದು ಜಿಡಿಎಸ್ ವಿರುದ್ಧ ಕಿಡಿಕಾರಿದರು.
ನನ್ನ ವಿರುದ್ಧ ಟೀಕೆ ಮಾಡ್ತಾರೆ :ನಾನು ಪಾರ್ಲಿಮೆಂಟ್‌ನಲ್ಲಿದ್ದಾಗ ಸುಮಲತಾ ಕಾಣಲಿಲ್ಲ ಅಂತಾರೆ. ಇಲ್ಲಿ ಬಂದರೇ ನನ್ನ ವಿರುದ್ಧ ಟೀಕೆ ಮಾಡ್ತಾರೆ. ಹಾಗಾದರೆ, ನಾನು ಎಲ್ಲಿಗೆ ಹೋಗಬೇಕು.? ಎಂದ್ರು.
ಭಯ ನನಗೂ ಇದೆ, ನನಗೆ ಶಕ್ತಿ ನೀಡಿ :ಎಷ್ಟು ಪಾರದರ್ಶಕವಾಗಿ ತನಿಖೆ ನಡೆಯುತ್ತದೆ ಎಂಬ ಭಯ ನನಗೂ ಇದೆ. ಜಿಲ್ಲೆಯ ರೈತರಿಗೆ ಪ್ರತಿ ವಿಷಯದಲ್ಲೂ ಅನ್ಯಾಯವಾಗುತ್ತಿದೆ. ದಯವಿಟ್ಟು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡ್ತೀನಿ, ತನಿಖೆಯಿಂದ ಸತ್ಯ ಹೊರ ಬರಬೇಕು ಎಂದು ಮನವಿ ಮಾಡಿದರು.
ನಿಮ್ಮ ಹೋರಾಟದ ಬೆಂಬಲವಾಗಿ ನಾನಿದ್ದೀನಿ, ನನಗೆ ಶಕ್ತಿ ನೀಡಿ. ನನ್ನಲ್ಲಿ ತಪ್ಪಿದ್ರೆ ಹೇಳಿ ತಿದ್ದಿಕೊಳ್ತೀನಿ ಎಂದ್ರು. ನಾನು ಈ ಮಣ್ಣಿನ ಸೊಸೆ, ಎಲ್ಲಾ ಅಧಿಕಾರವೂ ನನಗಿದೆ. ನಿಮಗೆ ನಾನು ಬೇಡ ಎನಿಸಿದಾಗ ಟಾಟಾ ಹೇಳಿ ಹೋಗ್ತೀನಿ ಎಂದರು.
ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ರೈತರೇ ನೀವೇ ಹೇಳಿ ನನ್ನ ಮಾತಿನಿಂದ ನಿಮಗೆ ಆತಂಕ ಆಯ್ತಾ?:ನನ್ನ ಮಾತಿನಿಂದ ರೈತರಿಗೆ ಆತಂಕ ಆಯ್ತು ಅಂತಾರೆ. ನೀವೇ ಹೇಳಿ ನನ್ನ ಮಾತಿನಿಂದ ನಿಮಗೆ ಆತಂಕವಾಯ್ತಾ.? ಅಕ್ರಮ ಗಣಿಗಾರಿಕೆಯಿಂದ KRS ಬಿರುಕಾಗುವ ಸಾಧ್ಯತೆ ಇದೆ ಎಂದಿದ್ದೇನೆ. ಅಕ್ರಮ ಗಣಿಗಾರಿಕೆ ಪದ ನಾನು ಬಳಸಿದಾಗೆಲ್ಲಾ ದುಡ್ಡು ವಸೂಲಿಗೆ ಎನ್ನುತ್ತಾರೆ. ಯಾರ್ ಯಾರಿಗೆ ಏನು ಅಭ್ಯಾಸ ಇದೆಯೋ ಅದನ್ನೇ ಅವರು ಮಾತನಾಡುವುದು ಎಂದು ವ್ಯಂಗ್ಯವಾಡಿದರು.
ಮಾತೆತ್ತಿದರೆ ಮಂಡ್ಯದವರು ಮುಗ್ಧರು :ಮಾತೆತ್ತಿದರೆ ಮಂಡ್ಯದವರು ಮುಗ್ಧರು ಅಂತಾರೆ. ಏನು ಹೇಗೆ ಬೇಕಾದರು ಮೋಸ ಮಾಡುಬಹುದು ಅನ್ನೋದ ನಿಮ್ಮ ಅಭಿಪ್ರಾಯ. ಸಾವಿನ ರಾಜಕಾರಣ ಯಾಕೆ, ಸಾವಿನ ಮನಗೆ ಹೋಗಿ ಒಂದಷ್ಟು ಕಾಸು ಕೊಟ್ಟು ಪಬ್ಲಿಸಿಟಿ ತಗೋಬೇಕಾ ಎಂದು ಪ್ರಶ್ನಿಸಿದ್ರು. ರೈತ ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ, ಹತ್ಯೆ ಅದು ಎಂದು ಕಿಡಿಕಾರಿದರು.
ಮಂಡ್ಯದ ಗುರುತೇ ಸ್ವಾಭಿಮಾನ :ಮಂಡ್ಯದ ಗುರುತೇ ಸ್ವಾಭಿಮಾನ. ಎಲ್ಲಾ ಒಗ್ಗಟ್ಟಾಗಿ ಹೋರಾಡಿ ನ್ಯಾಯ ಒದಗಿಸಿಕೊಳ್ಳೋಣ. ಮಂಡ್ಯದ ನನ್ನ ಸ್ವಾಭಿಮಾನಿ ಜನಕ್ಕೆ ನನ್ನ ನಮಸ್ಕಾರ.. ಎಂದ ಅವರು, ಕಳೆದ ಲೋಕಸಭಾ ಚುನಾವಣೆ ರೀತಿಯಲ್ಲೇ ಮಾತು ಆರಂಭಿಸಿದ ಸುಮಲತಾ, ಇವತ್ತು ಸುಮಲತಾ ಏನೇ ಮಾತನಾಡಿದ್ರೂ ರಾಜಕೀಯ ಬಣ್ಣ ಕೊಡುವ ಕೆಲಸ ಆಗುತ್ತೆ. ಅದರ ಬಗ್ಗೆ ನನಗೇನೂ ಬೇಜಾರು ಇಲ್ಲ ಎಂದರು.
ನನಗೆ ರಾಜಕೀಯ ಹೊಸದು :ಅವರ ಒಂದೆರೆಡು ಮಾತಲ್ಲಿ ನಿಜ ಇದೆ ಒಪ್ಪಿಕೊಳ್ಳೋಣ. ಸುಮಲತಾಗೆ ರಾಜಕೀಯ ಹೊಸದು, ಮಾಹಿತಿ ಕೊರತೆ ಇದೆ ಎನ್ನುತ್ತಾರೆ. ನಿಜ ನನಗೆ ರಾಜಕೀಯ ಹೊಸದೇ, ಭ್ರಷ್ಟಾಚಾರನೂ ಹೊಸದೇ ಎಂದು ದಳಪತಿಗಳಿಗೆ ಟಾಂಗ್ ನೀಡಿದ್ರು ಸಂಸದೆ ಸುಮಲತಾ. ನಾನು ಸಿನಿಮಾರಂಗದಿಂದ ಬಂದವಳು, ಅಲ್ಲಿ ಇದೆಲ್ಲಾ ಇರಲ್ಲ ಎಂದು ಹೇಳಿದರು.
ನನ್ನಲ್ಲಿ ತಪ್ಪಿದ್ದರೆ ಶಿಕ್ಷೆಗೆ ನಾನು ಸಿದ್ಧ :ಜನ ಬುದ್ಧಿ ಕಲಿಸಿದರೆ ಕಲಿಯುತ್ತೇನೆ. ನನ್ನಲ್ಲಿ ತಪ್ಪಿದ್ದರೆ ಶಿಕ್ಷೆಗೆ ನಾನು ಸಿದ್ಧ. ಚುನಾವಣೆ ವೇಳೆ ನಾನು ಹೋದಲ್ಲೆಲ್ಲಾ ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತುವಂತೆ ರೈತರು ಹೇಳಿದ್ರು. ಕಾವೇರಿ ನೀರಿನ ಸಮಸ್ಯೆ, ಅಕ್ರಮ ಗಣಿಗಾರಿಕೆ ಬಗ್ಗೆ ನಾನು ಸಂಸತ್‌ನಲ್ಲಿ ಮಾತನಾಡಿದ್ದೇನೆ ಎಂದರು.
ಮೈ ಶುಗರ್ ಖಾಸಗೀಕರಣ ಆಗಬೇಕು ಅಂತಾ ನಾನು ಎಲ್ಲೂ ಹೇಳಿಲ್ಲ :ಮೈ ಶುಗರ್ ಖಾಸಗೀಕರಣ ಆಗಬೇಕು ಅಂತಾ ನಾನು ಎಲ್ಲೂ ಹೇಳಿಲ್ಲ. ಸರ್ಕಾರ ನೂರಾರು ಕೋಟಿ ಸುರಿದರೂ ಕಾರ್ಖಾನೆ ಅಭಿವೃದ್ಧಿ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ರು. ಅದನ್ನೇ ಮಾಧ್ಯಮಗಳ ಮುಂದೆ ಹೇಳಿದ್ದೆ. ಯಾವ ರೀತಿಯಲ್ಲಾದ್ರೂ ಕಾರ್ಖಾನೆ ಆರಂಭಿಸಿ ಎಂದು ಸರ್ಕಾರದ ಬಳಿ ಮನವಿ ಮಾಡಿದ್ದೆ ಎಂದು ಹೇಳಿದರಲ್ಲದೇ, ಸರ್ಕಾರದಿಂದ ಕಾರ್ಖಾನೆ ನಡೆಸಲು ಆಗಲ್ಲ ಎಂದರೆ ಇನ್ನೊಂದು ದಾರಿ ಹೇಳಬೇಕಲ್ವಾ ಎಂದು ಹೇಳಿದರು.
ಕಾರ್ಖಾನೆ ಆರಂಭವಾಗದಿದ್ರೆ ಯಾರ್ಯಾರಿಗೆ ಲಾಭ :ಮೈ ಶುಗರ್ ಕಾರ್ಖಾನೆಯನ್ನು ನಮ್ಮವರಿಗೆ ಕೊಡಲು ಸ್ಕೆಚ್ ಹಾಕಿದ್ದೀನಂತೆ. ನಮ್ಮವರಿಗೆ ಕಾರ್ಖಾನೆ ನಡೆಸುವುದು ಗೊತ್ತಾ? ಇದರಿಂದ ಲಾಭ ಏನು.? ಕಾರ್ಖಾನೆ ಆರಂಭವಾಗದಿದ್ರೆ ಯಾರ್ ಯಾರಿಗೆ ಲಾಭ ಇದೆ ಯೋಚನೆ ಮಾಡಿ ಎಂದು ಹೇಳಿದ್ರು. ಈ ಬಗ್ಗೆ ಜನರು ಒಂದು ನಿರ್ಧಾರಕ್ಕೆ ಬರಬೇಕು, ನೀವು ಏನು ಹೇಳ್ತಿರೋ ಅದನ್ನೇ ನಾನು ಸರ್ಕಾರದ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು.