ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಅಂಬರೀಶ್ ಹುಟ್ಟೂರಾದ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಗೆ ಪತ್ನಿ, ಸಂಸದೆ ಸುಮಲತಾ ಅಂಬರೀಶ್ ಅವರು ಭೇಟಿ ಕೊಟ್ಟು ಅಂಬಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಲತಾ ಅವರ ಜೊತೆ ಹಿರಿಯ ನಟ ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್ ಸಹ ಭಾಗಿಯಾಗಿದ್ದರು.
ಮಾಧ್ಯಮದವರ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಇಂದು ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ. ಮಂಡ್ಯದಲ್ಲಿಂದು ಅಂಬಿ ಕನಸಿನ ಫೌಂಡೇಶನ್ ಲೋಕಾರ್ಪಣೆಯಾಗುತ್ತಿದೆ. ಅಭಿಮಾನಿಗಳು ಅಂಬಿ ಅವರನ್ನು ಕಲಿಯುಗದ ಕರ್ಣ ಎಂದು ಕರೆದರು. ಅದೇ ಹಾದಿಯಲ್ಲಿ ಅವರ ಲೆಗೆಸಿ ಮುಂದುವರೆಸುತ್ತೇವೆ. ಹಾಗಾಗಿ, ಅವರ ಪುಣ್ಯಸ್ಮರಣೆಯ ದಿನದಂದು ಅಂಬರೀಶ್ ಫೌಂಡೇಶನ್ ಉದ್ಘಾಟನೆಯಾಗುತ್ತಿದೆ. ಅಂಬಿ ಅವರನ್ನು ಯಾರೂ ಮರೆತಿಲ್ಲ. ನಾನು ಹೋದ ಕಡೆಯಲ್ಲಾ ಅಂಬರೀಶ್ ಅವರನ್ನು ನೆನೆಯುತ್ತಾರೆ. ಅವರ ಬಗ್ಗೆ ಪ್ರತಿದಿನ, ಪ್ರತಿಕ್ಷಣ ಮಾತನಾಡುತ್ತಾರೆ. ಅಂಬಿ ನೆನಪಾಗದ ದಿನ, ಕ್ಷಣವೇ ಇಲ್ಲ ಎಂದು ತಿಳಿಸಿದರು.
ಅಭಿ ನಟನೆಯ ಸಿನಿಮಾ ಈ ದಿನವೇ ರಿಲೀಸ್ ಆಗುತ್ತೆ ಎಂದು ನಾವು ಅಂದುಕೊಂಡಿರಲಿಲ್ಲ. ಅಂಬರೀಶ್ ಅವರ ಆಶೀರ್ವಾದದಿಂದಲೇ ಇಂದು ಬ್ಯಾಡ್ ಮ್ಯಾನರ್ಸ್ ಚಿತ್ರ ರಿಲೀಸ್ ಆಗಿದೆ ಎನಿಸುತ್ತಿದೆ. ಅಭಿಮಾನಿಗಳು ಅಂಬರೀಶ್ ಅವರನ್ನು ಅಭಿಯಲ್ಲಿ ಕಾಣ್ತಾರೆ. ಹಂತಹಂತವಾಗಿ ಕಷ್ಟಪಟ್ಟು ಅಭಿ ಬೆಳೆದು ಬರಬೇಕು. ತಂದೆಯಂತೆ ಅಭಿ ಕೂಡ ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡಬೇಕು. ಇಂದಿನ ಸಂಪೂರ್ಣ ದಿನ ಅಂಬರೀಶ್ ಅವರಿಗಾಗೇ ಮೀಸಲು. ಹಾಗಾಗಿ ಇಂದು ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಲ್ಲ. ಅಂಬರೀಶ್ ಅವರ ಕನಸನ್ನು ಮುಂದುವರಿಸುವುದಷ್ಟೇ ನಮ್ಮ ಕೆಲಸ ಎಂದು ತಿಳಿಸಿದರು.