ಮಂಡ್ಯ:ಪಕ್ಷೇತರ ಅಭ್ಯರ್ಥಿಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಮಂಡ್ಯದ ಚಾಮುಂಡೇಶ್ವರ ನಗರದಲ್ಲಿರುವ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದರು, ಇಂದಿನಿಂದ ನನ್ನ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಪಕ್ಷಕ್ಕೆ ನೀಡುತ್ತೇನೆ ಎಂದು ತಿಳಿಸಿದರು.
ನಾನು ಪಕ್ಷೇತರ ಸಂಸದೆಯಾದ್ದರಿಂದ ಬಿಜೆಪಿ ಪಕ್ಷಕ್ಕೆ ಸೇರ್ತಿಲ್ಲ. ನನ್ನ ಅವಧಿ ಮುಗಿಯುವವರೆಗೂ ಪಕ್ಷೇತರ ಸಂಸದೆಯಾಗಿಯೇ ಇರುತ್ತೇನೆ. ಆದರೆ ನನ್ನ ಸಂಪೂರ್ಣ ಬೆಂಬಲವನ್ನು ಬಿಜೆಪಿ ಕೊಡ್ತಿದ್ದೀನಿ ಎಂದು ಸ್ಪಷ್ಟಪಡಿಸಿದರು. ಇದು ನನ್ನ ಭವಿಷ್ಯ ಅಲ್ಲ, ಮಂಡ್ಯ ಜಿಲ್ಲೆ ಅಭಿವೃದ್ಧಿ ವಿಷಯ. ಈ ನಿರ್ಧಾರ ಮಾಡಲು 4 ವರ್ಷ ತೆಗೆದುಕೊಂಡಿದ್ದೇನೆ. ನಾನು ಕ್ಷೇತ್ರಕ್ಕೆ ಇಷ್ಟು ಯೋಜನೆ ತರಲು ಸಹಕಾರ ಮಾಡಿದ್ದು. ಕೇಂದ್ರ ಬಿಜೆಪಿ ಸರ್ಕಾರ. ನನ್ನ ಇವತ್ತಿನ ನಿರ್ಧಾರ ಒಂದಷ್ಟು ಜನಕ್ಕೆ ಬೇಸ ಆಗಬಹುದು. ನನ್ನ ಭವಿಷ್ಯ ಹೇಗಿರುತ್ತೆ ಅಂತಾ ಆತಂಕ ಕಾಡಬಹುದು. ಆದರೆ ನನಗೆ ಅದ್ಯಾವ ಯೋಚನೆಯೂ ಇಲ್ಲ. ಆಪ್ತರು, ಹಿತೈಷಿಗಳನ್ನ ಕೇಳಿ ಈ ನಿರ್ಧಾರ ಮಾಡಿದ್ದೇನೆ. ನನ್ನ ನಿರ್ಧಾರಕ್ಕೆ ಅಂಬರೀಶ್ ಆಶೀರ್ವಾದ ಇದೆ ಎಂದು ನಂಬಿದ್ದೇನೆ ಎಂದು ಸುಮಲತಾ ಪ್ರಕಟಿಸಿದರು.
ನಾನು ಕುಟುಂಬ ರಾಜಕಾರಣಕ್ಕೆ ಬಂದಿಲ್ಲ. ಆಕ್ಮಸಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಾನು ರಾಜಕೀಯವಾಗಿ ಪ್ರವೇಶ ಮಾಡಿ ನಾಲ್ಕು ವರ್ಷ ಆಗಿದೆ. ಆಗ ಹಾಲಿ ಮುಖ್ಯಮಂತ್ರಿ ಮಗನ ಎದುರು ನಿಂತು ಗೆದ್ದೆ. ಅಂದು ನನ್ನ ಪರವಾಗಿ ಸಿನಿಮಾರಂಗದವರು ನಿಂತುಕೊಂಡಿದ್ದರು, ಅಲ್ಲದೇ ನಮ್ಮ ರಾಜಕಾರಣಿಗಳು ಕೂಡ ನಮ್ಮ ಪರವಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದರು. ನಾನು ಹೋರಾಟ ಮಾಡಿ ಅಂದು ಚುನಾವಣೆಗೆ ನಿಂತುಕೊಂಡಿದ್ದು ಅಂಬರೀಶ್ ಅವರ ಅಭಿಮಾನಿಗಳಿಗಾಗಿ ಹೊರತು ನನಗಾಗಿ ಅಲ್ಲ ಎಂದರು.