ಮಂಡ್ಯ: ಕೆಆರ್‌ಎಸ್ ಅಣೆಕಟ್ಟು ಸುತ್ತಮುತ್ತ ಸೇರಿದಂತೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ಇದೀಗ ಮತ್ತೆ ಗಣಿ ಕದನಕ್ಕೆ ಸಜ್ಜಾಗಿದ್ದಾರೆ.
ನಗರದ ಜಿಲ್ಲಾ ಪಂಚಾಯತಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ (ಇಂದು) ದಿಶಾ ಸಭೆ ನಡೆಯಲಿದೆ. ಸಭೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಬೇಬಿ ಬೆಟ್ಟದಲ್ಲಿ ಬಾಂಬ್ ನಿಷ್ಕ್ರಿಯ ತಂಡದವರ ಕಣ್ಣಿಗೆ ಬೀಳದ ಸ್ಫೋಟಕಗಳು ಸಾರ್ವಜನಿಕರ ಕಣ್ಣಿಗೆ ಬಿದ್ದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಈಗಾಗಲೇ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆ ಅಪಾಯಕ್ಕೆ ಸಿಲುಕಿರುವುದು, ಪರಿಸರದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳು, ಸಾರ್ವಜನಿಕ ಆತಂಕ, ಜೀವ ವೈವಿಧ್ಯದ ಮೇಲಾಗಿರುವ ಪರಿಣಾಮಗಳು, ವಾಯುಮಾಲಿನ್ಯ, ಜಲಮಾಲಿನ್ಯ, ಸಂಕುಲಗಳು ಅಪಾಯಕ್ಕೆ ಸಿಲುಕಿರುವ ಬಗ್ಗೆ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಖಾವತ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಣಿ ಖಾತೆ ರಾಜ್ಯ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರದ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.