ಮಂಡ್ಯ:ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ ಸಂಸದೆ ಸುಮಲತಾ ಪಕ್ಷ ಸೇರ್ಪಡೆ ವಿಚಾರ ಇನ್ನು ಪ್ರಶ್ನೆಯಾಗೇ ಉಳಿದಿದೆ. ಈ ನಡುವೆ ಕಾಂಗ್ರೆಸ್ ಸೇರಲು ನಡೆದಿದ್ದ ಪ್ರಯತ್ನಗಳ ಬಗ್ಗೆ ಸ್ವತಃ ಸುಮಲತಾ ಮಾತನಾಡಿದ್ದು, ಪಕ್ಷ ಸೇರ್ಪಡೆಗೆ ಅಡ್ಡಿಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್. ಬಿಜೆಪಿ ಅಸೋಸಿಯಟ್ ಮೆಂಬರ್ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು. ಏನನ್ನು ವಿಚಾರಿಸದೇ ಅವರ ಅಭಿಪ್ರಾಯ ಹೇಳುವುದು ತಪ್ಪು. ನಾನು ಎಂಪಿ ಆಗಿರುವ ಮೂರು ವರ್ಷದ ಅವಧಿಯಲ್ಲಿ ಡಿಕೆಶಿ ಜೊತೆ ಮಾತಾಡಿಲ್ಲ. ಒಂದು ಪಕ್ಷದ ರಾಜ್ಯಾಧ್ಯಕ್ಷ ಆದವರು ಜಿಲ್ಲೆಯಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಂಡು ಮಾತಾಡಬೇಕು ಎಂದರು.
ನನ್ನ ಗಂಡ ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್‌ನಲ್ಲಿ ಇದ್ದರು. ನಾನು ಆರಂಭದಲ್ಲಿ ನನ್ನ ಲೈಫ್‌ನಲ್ಲಿ ಮಂಡ್ಯಗೆ ಟಿಕೆಟ್ ಕೊಡಿ ಎಂದಿದ್ದು ಕಾಂಗ್ರೆಸ್‌ನನ್ನು. ಕಾಂಗ್ರೆಸ್‌ನ್ನು ಬಿಟ್ಟು ಬೇರೆ ಯಾವ ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ. ಅಂಬರೀಶ್ ಅವರಿಗೆ ಎಲ್ಲ ಪಕ್ಷದ ನಾಯಕರ ಜೊತೆ ಉತ್ತಮ ಒಡನಾಟ ಇತ್ತು. ನಾನು ಯಾರನ್ನು ಬೇಕಾದರೂ ಟಿಕೆಟ್ ಕೇಳ ಬಹುದಿತ್ತು. ನಾನು ಕೇಳಿದ್ದು ಕಾಂಗ್ರೆಸ್ ಪಕ್ಷವನ್ನು ಮಾತ್ರ. ಅಂಬರೀಶ್ ಅವರು ಇದ್ದ ಪಕ್ಷ ಎಂದು ಕಾಂಗ್ರೆಸ್‌ನ್ನು ಕೇಳಿದ್ದೆ. ಆ ಟೈಂನಲ್ಲಿ ಟಿಕೆಟ್ ಕೊಡಲ್ಲ ಎಂದಿದ್ದೆ ಡಿ. ಕೆ ಶಿವಕುಮಾರ್. ಮಂಡ್ಯ ಬೇಡ ನೀವು ಬೆಂಗಳೂರು ದಕ್ಷಿಣ ಅಥವಾ ಉತ್ತರದಲ್ಲಿ ನಿಂತುಕೊಳ್ಳಿ. ಮಂಡ್ಯದಲ್ಲಿ ತುಂಬಾ ಕಷ್ಟ ಆಗುತ್ತೆ, ಮಂಡ್ಯ ಆಗಲ್ಲ ಎಂದಿದ್ದು ಡಿಕೆಶಿ. ಈ ಮಾತನ್ನು ಅವರನ್ನು ಕೇಳಿ ಅವರು ಇದನ್ನು ಒಪ್ಪಿಕೊಳ್ಳಲೇಬೇಕು.