ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ನಾನು ಮಂಡ್ಯದಲ್ಲೆ ಸ್ವಂತ ಮನೆ ಮಾಡುತ್ತೇನೆ ಎಂದಿದ್ದರು. ಅದರಂತೆ ಚುನಾವಣೆಯಲ್ಲಿ ಗೆದ್ದ ಎರಡು ವರ್ಷದ ಬಳಿಕ ಮಂಡ್ಯದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಶಿ ಎಂಬುವವರ ಬಳಿ ಹನಕೆರೆ ಸಮೀಪ ಒಂದು ಎಕರೆಯಷ್ಟು ಜಾಗ ಖರೀದಿಸಿ ಮನೆ ನಿರ್ಮಿಸುತ್ತಿದ್ದು, ಪುತ್ರನೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಮಗನ ರಾಜಕೀಯ ಎಂಟ್ರಿಗೂ ಇದೇ ಮಾರ್ಗ..
ಸ್ವಂತ ಮನೆ ನಿರ್ಮಾಣದ ಹಿಂದೆ ಅಭಿಷೇಕ್ ಅಂಬರೀಶ್ ರಾಜಕೀಯ ನೆಲೆ ಚಿಂತನೆಯಿದ್ದು, ಮದ್ದೂರು ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ಕೇಳಿಬರ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಮಲತಾ ಯಾರ್ಯಾರ ಮನಸ್ಸಲ್ಲಿ ಏನೇನು ಇದೆಯೋ ಗೊತ್ತಿಲ್ಲ, ಅವರ ಊಹೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಮಂಡ್ಯದಲ್ಲೇ ಸುಮಲತಾರಿಂದ ಮನೆಗೆ ಗುದ್ದಲಿ ಪೂಜೆ..ಮಗನ ರಾಜಕೀಯಕ್ಕೂ ಇಲ್ಲೇ ಬುನಾದಿ...! ಪುತ್ರನ ರಾಜಕೀಯ ಪ್ರವೇಶಕ್ಕೆ ಗ್ರೀನ್ ಸಿಗ್ನಲ್..
ಕೊಟ್ಟ ಭರವಸೆ ಈಡೇರಿಸಿದ್ದೇನೆ. ಇಲ್ಲೇ ವಾಸ ಮಾಡಬೇಕು ಎಂಬುದು ನನ್ನ ಹಾಗೂ ಅಭಿ ಆಸೆ. ಹಾಗಾಗಿ ಇವತ್ತು ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ನಾನು ರಾಜಕೀಯಕ್ಕೆ ಬರ್ತೀನಿ, ಎಂಪಿ ಆಗ್ತೀನಿ ಅಂತ ಕನಸಲ್ಲು ನೆನಸಿರಲಿಲ್ಲ. ದೇವರು ಬರೆದಂತೆ ಭವಿಷ್ಯ ಇರುತ್ತೆ. ನಮ್ಮ ಪ್ಲಾನಿಂಗ್ ಪ್ರಕಾರ ನಡೆಯಲ್ಲ. ನನ್ನ ಒಪ್ಪಿಗೆ ತೆಗೆದುಕೊಂಡು ಮಗ ರಾಜಕೀಯಕ್ಕೆ ಬರಬೇಕಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಪುತ್ರ ಅಭಿಷೇಕ್ ರಾಜಕೀಯಕ್ಕೆ ಬರೋದಾದ್ರೆ ನನ್ನ ಅಡ್ಡಿಯಿಲ್ಲ ಎಂದು ಗ್ರೀನ್ ಸಿಗ್ನಲ್ ಸಹ ಕೊಟ್ಟಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ಅಮ್ಮ ಕೊಟ್ಟ ಮಾತಿನಂತೆ ಸಿಂಪಲ್ಲಾಗಿ ಮನೆ ಮಾಡ್ತಿದ್ದೇವೆ. ಅಭಿಮಾನಿಗಳು ನಮ್ಮ ಜೊತೆಯಲ್ಲಿರಬೇಕು, ಬೆಳೆಯಬೇಕು ಎಂಬ ಆಸೆಯಿಂದ ಮಾತಾಡ್ತಾರೆ. ಇಲ್ಲಿಯವರೆಗು ಬೆಳೆಸಿದ್ದಾರೆ. ಮುಂದಕ್ಕೂ ಬೆಳೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓದಿ: ಮಂಡ್ಯದಲ್ಲಿ ನೂತನ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಂಸದೆ ಸುಮಲತಾ