ಮಂಡ್ಯ : ವಸತಿ ಶಾಲೆಯ ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಜಿಲ್ಲೆಯ ತಂಗಳಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಮನೆಯಿಂದ ಶಾಲೆಗೆ ಮಗನನ್ನು ಬಿಟ್ಟು ಬಂದಿದ್ದ ತಂದೆ, ಗಣೇಶನ ಹಬ್ಬಕ್ಕೆಂದು ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ವಿದ್ಯಾರ್ಥಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
20 ದಿನಗಳ ಹಿಂದೆ ಈರೇಗೌಡ ಎಂಬುವರು ತಮ್ಮ ಮಗ 9ನೇ ತರಗತಿ ಓದುತ್ತಿದ್ದ ಕಿಶೋರ್ನನ್ನು ಶಾಲೆಗೆ ಬಿಟ್ಟು ಬಂದಿದ್ದರು. ಬಳಿಕ ಕಳೆದ 3 ದಿನಗಳ ಹಿಂದೆ ಗಣಪತಿ ನಿಮಜ್ಜನದಂದು ಮಗನನ್ನು ಮನೆಗೆ ಕರೆದುಕೊಂಡು ಬರಲು ಹೋದಾಗ, ಶಾಲೆಯ ಆಡಳಿತ ಮಂಡಳಿ ನಿಮ್ಮ ಮಗ ಸುಮಾರು 15 ದಿನಗಳಿಂದ ಶಾಲೆಗೆ ಬಂದಿಲ್ಲ. ಆತ ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಬೇಜಾಬ್ದಾರಿತನದ ಹೇಳಿಕೆ ನೀಡಿದ್ದರಂತೆ.
ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಷಕರ ಆಕ್ರೋಶ :ಇದರಿಂದ ಗಲಿಬಿಲಿಗೊಂಡ ಪೋಷಕರು ಶಾಲೆಯ ಸಿಸಿಟಿವಿ ಪರಿಶೀಲಿಸಿದ್ದು, ಸಿಸಿಟಿವಿ ದೃಶ್ಯದಲ್ಲಿ ಬಾಲಕ ಶಾಲೆಗೆ ಬಂದಿರುವ ದೃಶ್ಯ ಮಾತ್ರ ಕಂಡುಬಂದಿದೆ. ಹೊರಗೆ ಹೋಗುವ ಯಾವುದೇ ದೃಶ್ಯಗಳು ಸಿಕ್ಕಿಲ್ಲ. ಹೀಗಾಗಿ ಬಾಲಕ ನಾಪತ್ತೆಯಾಗಿರುವುದು ಪೋಷಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.