ಮಂಡ್ಯ: ಕಳೆದ 38 ವರ್ಷಗಳಿಂದ ಚರ್ಮ ತಜ್ಞ ಡಾ. ಶಂಕರೇಗೌಡ ಅವರು ಚಿಕಿತ್ಸೆ ನೀಡಲು ಒಬ್ಬರಿಂದ ಕೇವಲ 5 ರೂ. ಶುಲ್ಕವಾಗಿ ಪಡೆಯುತ್ತಿದ್ದಾರೆ. ಸಮಾಲೋಚನೆ ಮತ್ತು ಚಿಕಿತ್ಸೆಯ ಹೊರತಾಗಿಯೂ ಗೌಡರು ತಮ್ಮ ರೋಗಿಗಳಿಗೆ ಉತ್ತಮ ಹಾಗೂ ಕೈಗೆಟುಕುವ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಜೊತೆಗೆ, ಎಲ್ಲ ರೀತಿಯ ಚರ್ಮ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ಪಾಲಿಗೆ ದೇವರಾಗಿದ್ದಾರೆ.
ಹೀಗೆ ಅವಿರತ ಸೇವೆ ಮಾಡಲು ಮತ್ತು ಶುಲ್ಕ ಹೆಚ್ಚಿಸದೇ ಇರಲು ಕಾರಣವೇನು?: ಮೈಸೂರು ವೈದ್ಯಕೀಯ ಕಾಲೇಜು ಸಂಶೋಧನೆ ಮತ್ತು ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾದ ಡಾ. ಕೆ ಗೋವಿಂದ ಅವರ ಸೇವೆ ಮತ್ತು ಸಮರ್ಪಣೆಯಿಂದ ಡಾ. ಗೌಡರು ಸ್ಫೂರ್ತಿ ಪಡೆದಿದ್ದಾರೆ. 'ನಾನು ಮಗುವಾಗಿದ್ದಾಗ, ನನ್ನ ವೈದ್ಯಕೀಯ ಸಮಾಲೋಚನೆಗಾಗಿ ನಾನು ಡಾ. ಗೋವಿಂದರನ್ನು ಭೇಟಿ ಮಾಡುತ್ತಿದ್ದೆ.
ಅವರು ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಮತ್ತು ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಬಾಲ್ಯದಿಂದಲೂ ಅವರು ನನ್ನ ಸ್ಫೂರ್ತಿಯ ಮೂಲವಾಗಿದ್ದರು. ಇದು ನಾನು ಸೇವೆ ಸಲ್ಲಿಸಲು ಕಾರಣವಾಯಿತು' ಎಂದು ಐದು ರೂಪಾಯಿ ವೈದ್ಯರು ಹೇಳುತ್ತಾರೆ.
ಡಾ. ಶಂಕರೇಗೌಡ ಬೆಳೆದಂತೆ ಇಂಜಿನಿಯರಿಂಗ್ ಕಡೆಗೆ ಒಲವು ತೋರಿದರು. ಆದರೆ, ಕೆಲವು ಕಾರಣಗಳಿಂದಾಗಿ ಅವರ ಕುಟುಂಬದವರು ಡಾಕ್ಟರ್ ಆಗಬೇಕೆಂದು ಬಯಸಿದ್ದರು. ಆದ್ದರಿಂದ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಮಾಡಿದರು ಮತ್ತು ವೆನೆರಿಯಾಲಜಿ ಮತ್ತು ಡರ್ಮಟಾಲಜಿ (ಡಿವಿಡಿ) ನಲ್ಲಿ ಡಿಪ್ಲೊಮಾ ಮಾಡಿದರು.
ಓದುವಾಗಲೇ ಮೂಡಿದ್ದ ಆಲೋಚನೆ:ಎಂಬಿಬಿಎಸ್ ವ್ಯಾಸಂಗ ಮಾಡಿದ ನಂತರ ಒಂದು ಆಲೋಚನೆ ಅವರಲ್ಲಿ ಮೂಡಿತು. ತಮ್ಮ ಜ್ಞಾನವನ್ನು ಹಳ್ಳಿ ಮತ್ತು ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಬಳಸಬಹುದೆಂದು ಅವರು ಭಾವಿಸಿದ್ದರು. ಹಾಗಾಗಿ, ಸಮಾಲೋಚನೆ, ಚಿಕಿತ್ಸೆ, ತಪಾಸಣೆ ಇತ್ಯಾದಿಗಳಿಗೆ (ಮೂಲತಃ ಸಂಪೂರ್ಣ ವೈದ್ಯಕೀಯ ಪ್ಯಾಕೇಜ್) 5 ರೂ.ಗಳನ್ನು ವಿಧಿಸುವ ಮೂಲಕ ಅವರು ಅಭ್ಯಾಸವನ್ನು ಪ್ರಾರಂಭಿಸಿದರು. ಅದರ ನಂತರ ಅವರು ಶುಲ್ಕವನ್ನು ಹೆಚ್ಚಿಸಲು ಎಂದಿಗೂ ಯೋಚಿಸಲಿಲ್ಲ. ಅವರು ಸಮಾಜಕ್ಕೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಕೈಯ್ಯಲಾದ ಸೇವೆ ನೀಡಲು ಬಯಸುತ್ತೇನೆ ಎನ್ನುತ್ತಾರೆ.