ಮಂಡ್ಯ:ಮನ್ಮುಲ್ನಲ್ಲಿ ಜೆಡಿಎಸ್‌ನ ಇಬ್ಬರು ನಿರ್ದೇಶಕರ ಸದಸ್ಯತ್ವ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೆ ನೋಟಿಸ್ ನೀಡಲಾಗಿದೆ.
ಜೆಡಿಎಸ್‌ನ ಇಬ್ಬರು ಮನ್‌ಮುಲ್ ನಿರ್ದೇಶಕರ ಮೇಲೆ ಅನರ್ಹತೆಯ ತೂಗುಗತ್ತಿ..! ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡಿದ್ದ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಹೆಚ್.ಟಿ. ಮಂಜುನಾಥ್ ಹಾಗೂ ನಾಗಮಂಗಲದ ಪ್ರಭಾವಿ ಜೆಡಿಎಸ್ ಮುಖಂಡ ನೆಲ್ಲಿಗೆರೆ ಬಾಲು ಸದಸ್ಯತ್ವ ರದ್ದು ಮಾಡಲು ಸರ್ಕಾರ ಮುಂದಾಗಿದೆ.
ಹೆಚ್.ಟಿ. ಮಂಜುನಾಥ್ ಸಂಘದ ಬೈಲಾ ಪ್ರಕಾರ 180 ದಿನಗಳ ಕಾಲ ಡೈರಿಗೆ ಹಾಲು ನೀಡಿಲ್ಲ. ಹಾಗಾಗಿ ನಿಮ್ಮ ಸದಸ್ಯತ್ವನ್ನು ಏಕೆ ಅನರ್ಹ ಮಾಡಬಾರದು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ನೋಟಿಸ್ ನೀಡಿದ್ದಾರೆ. ಇನ್ನು, ನೆಲ್ಲಿಗೆರೆ ಬಾಲು ಸಹೋದರ ಮುದ್ದೇಗೌಡ ಎಂಬುವರು ಸ್ಥಳೀಯ ಡೈರಿಯ ಕಾರ್ಯದರ್ಶಿಯಾಗಿದ್ದಾರೆ. ಮನ್‌ಮುಲ್ ಚುನಾವಣೆಗೆ ಸ್ಪರ್ಧಿಸಬೇಕಾದರೆ, ಅಭ್ಯರ್ಥಿಯ ಹತ್ತಿರದ ಸಂಬಂಧಿಗಳು ಮನ್ಮುಲ್ನಲ್ಲಿ ನೌಕರರಾಗಿರಬಾರದು. ಆದರೆ ಬಾಲು ಸಹೋದರ ಡೈರಿ ಕಾರ್ಯದರ್ಶಿ ಆಗಿರುವುದನ್ನೇ ಮುಂದಿಟ್ಟುಕೊಂಡು ನೋಟಿಸ್ ನೀಡಿದ್ದು, ಇಬ್ಬರೂ ಸೆಪ್ಟಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಇನ್ನು, ಸೆಪ್ಟಂಬರ್ 23ರಂದು ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಒಂದೊಮ್ಮೆ ಈ ಇಬ್ಬರೂ ಜೆಡಿಎಸ್ ಬೆಂಬಲಿತ ಸದಸ್ಯರ ಸದಸ್ಯತ್ವ ಅನರ್ಹಗೊಂಡರೆ ಜೆಡಿಎಸ್ ಕನಸು ನುಚ್ಚು ನೂರಾಗಲಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.