ಮಂಡ್ಯ:ಕರುನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರು ದಸರಾದ ಮೂಲನೆಲೆ ಶ್ರೀರಂಗಪಟ್ಟಣ ದಸರಾ ಇಂದು ಆರಂಭವಾಗಿದ್ದು ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ. ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಚಾಲನೆ ನೀಡಿದರು.
ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿ ಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ನಂದಿಧ್ವಜ ಪೂಜೆ ನೇರವೇರಿತು. ಮಧ್ಯಾಹ್ನ 2.30 ರಿಂದ 3.15ರವರೆಗೂ ಸಲ್ಲುವ ಶುಭ ಲಗ್ನದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆಗೆ ಪ್ರಮೋದಾದೇವಿ ಒಡೆಯರ್ ಚಾಲನೆ ಕೊಟ್ಟರು. ಜಂಬೂಸವಾರಿಯಲ್ಲಿ ಅಂಬಾರಿ ಆನೆಯಾದ ಮಹೇಂದ್ರ ಹಾಗೂ ಅಕ್ಕಪಕ್ಕದಲ್ಲಿ ವಿಜಯ, ವಿಜಯಲಕ್ಷ್ಮೀ ಆನೆಗಳು ರಾಜಗಾಂಭೀರ್ಯದಿಂದ ಸಾಗಿದವು.
ಬನ್ನಿಮಂಟಪದಿಂದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆಕೋಲಾಟ, ಗಾರುಡಿಗೊಂಬೆ, ತಮಟೆ, ದೊಣ್ಣೆವರಸೆ ಸೇರಿದಂತೆ ಸ್ತಬ್ದ ಚಿತ್ರಗಳಿದ್ದ ಅದ್ಧೂರಿ ಮೆರವಣಿಗೆ ರಂಗನಾಥ ದೇವಾಲಯದವರೆಗೂ ಸಾಗಿತು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಸೇರಿ ಅನೇಕರು ಭಾಗಿಯಾಗಿದ್ದರು.
ಬನ್ನಿಮಂಟಪದಿಂದ ಶ್ರೀರಂಗನಾಥ ದೇವಸ್ಥಾನದವರೆಗೂ ಜಂಜೂಸವಾರಿ ಸಾಗಿತು. ಬನ್ನಿಮಂಟಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹೇಂದ್ರ, ವಿಜಯ, ವರಲಕ್ಷ್ಮೀ ಆನೆಗಳು ವಿಶೇಷ ಚಿತ್ರಾಲಂಕಾರದಿಂದ ಕಂಗೊಳಿಸಿದವು. ಇನ್ನೊಂದೆಡೆ ಇಡೀ ಶ್ರೀರಂಗಪಟ್ಟಣ ಮಧುವಗಿತ್ತಿಯಂತೆ ಸಿಂಗಾರಗೊಂಡಿದೆ.