ಕರ್ನಾಟಕ

karnataka

ETV Bharat / state

ಕಾವೇರಿ ತೀರ್ಪು ಕನ್ನಡಿಗರ ಪರ ಬರಲಿ : ಮಂಡ್ಯದಲ್ಲಿ ಕಾವೇರಿ ಮಾತೆಗೆ ವಿಶೇಷ ಅಭಿಷೇಕ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಕರ್ನಾಟಕದ ಪರ ಬರಲೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Special abhisheka for Kaveri Mata in Mandya
ಮಂಡ್ಯದಲ್ಲಿ ಕಾವೇರಿ ಮಾತೆಗೆ ವಿಶೇಷ ಅಭಿಷೇಕ

By ETV Bharat Karnataka Team

Published : Sep 4, 2023, 12:25 PM IST

ಕಾವೇರಿ ತೀರ್ಪು ಕನ್ನಡಿಗರ ಪರ ಬರಲಿ : ಮಂಡ್ಯದಲ್ಲಿ ಕಾವೇರಿ ಮಾತೆಗೆ ವಿಶೇಷ ಅಭಿಷೇಕ

ಮಂಡ್ಯ :ತಮಿಳುನಾಡಿಗೆ ನಿರಂತರ ನೀರು ಹರಿಸಿ ಕಾವೇರಿ ಕೊಳ್ಳದ ಜಲಾಶಯ ಬರಿದು ಮಾಡಿರುವ ಸರ್ಕಾರದ ಮೇಲಿನ ನಂಬಿಕೆ ಹುಸಿಯಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಾವೇರಿ ಮಾತೆಗೆ ವಿಶೇಷ ಅಭಿಷೇಕ ಮಾಡುವ ಮೂಲಕ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕರ್ನಾಟಕದ ಪರ ಬರಲಿ ಎಂದು ಪ್ರಾರ್ಥಿಸಿದರು.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನವನದಲ್ಲಿರುವ ಕಾವೇರಿ ಮಾತೆಗೆ ನದಿಯಿಂದ ತಂದಿದ್ದ ನೀರಿನಿಂದ ಮೊದಲು ಜಲಾಭಿಷೇಕ ಮಾಡಿದರು. ಬಳಿಕ ಹಾಲು, ಅರಿಶಿನ, ಕುಂಕುಮ, ತುಪ್ಪ, ಸಕ್ಕರೆ, ಜೇನುತುಪ್ಪ ಮತ್ತು ಎಳನೀರು ಅಭಿಷೇಕ ಮಾಡಿ ಹಸಿರು ಸೀರೆ ಹೊದಿಸಿ ಪುಷ್ಪಾರ್ಚನೆ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಿದರು. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, "ಕಾವೇರಿಕೊಳ್ಳದ ಕೆ ಆರ್ ಎಸ್ ಮತ್ತು ಕಬಿನಿ ಜಲಾಶಯದ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಾಣುತ್ತಿದ್ದರೂ ಇಂದಿಗೂ ಸಹ ಪ್ರತಿನಿತ್ಯ ನೀರು ಬಿಡುಗಡೆ ಮಾಡುತ್ತಿದೆ. ಇದ್ದ ನೀರೆಲ್ಲಾ ಖಾಲಿಯಾಗುತ್ತಿದೆ. ಆಳುವ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳ ಮೇಲೆ ಇಟ್ಟಿದ್ದ ನಂಬಿಕೆ ಸಂಪೂರ್ಣ ಹುಸಿಯಾಗಿರುವುದರಿಂದ ನಮಗೆ ಕಾವೇರಿ ಮಾತೆಯೇ ದಿಕ್ಕು" ಎಂದು ಹೇಳಿದರು.

ಕಾವೇರಿ ಮಾತೆಯನ್ನು ನಂಬಿ ಬದುಕು ಸಾಧಿಸುತ್ತಿರುವ ರೈತರನ್ನು ಕಾಪಾಡಲು ಕಾವೇರಮ್ಮ ಮಳೆಯನ್ನಾದರೂ ಸುರಿಸಿ ಸಮಸ್ಯೆಗೆ ಪರಿಹಾರ ರೂಪಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಇದರ ಜೊತೆಗೆ ಸೆ. 6 ರಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಕರ್ನಾಟಕದ ಪರ ಬರಲಿ ಎಂದು ಆಶಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.

ರಾಜ್ಯವನ್ನಾಳಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರು ದಪ್ಪ ಚರ್ಮದವರಾಗಿದ್ದಾರೆ. ಇವರಿಗೆ ರೈತರ ಕೂಗು ಕೇಳಿಸುತ್ತಿಲ್ಲ, ನಾಡಿನ ಜನರ ಬಲಿ ಕೊಟ್ಟು ರಾಜಕಾರಣ ಮಾಡಲು ಮುಂದಾಗಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಜಲಾಶಯಗಳಿಂದ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ, ರೈತರ ಹಿತ ಕಾಪಾಡಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕಾವೇರಿ ನಿಯಂತ್ರಣ ಸಮಿತಿ, ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾಸ್ತವ ವಿಚಾರ ಮಂಡನೆ ಮಾಡುವಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ವಾಸ್ತವ ಮನವರಿಕೆ ಮಾಡಿಕೊಡಲು ಮುಂದಾಗಬೇಕಾಗಿದೆ. ರಾಜ್ಯದ ಸಂಸದರು ಮತ್ತು ಶಾಸಕರು ಧ್ವನಿ ಎತ್ತುತ್ತಿಲ್ಲ, ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದ್ದರೂ ಹೋರಾಟ ಮಾಡಲು ಮುಂದಾಗಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ :ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ವಾಟಾಳ್ ತಮಟೆ ಚಳವಳಿ

ಕರ್ನಾಟಕಕ್ಕೆ ಸದ್ಯದ ಸ್ಥಿತಿಯಲ್ಲಿ ದೇವರೇ ದಿಕ್ಕು, ಕಾವೇರಿ ವಿಚಾರದಲ್ಲಿ ಆಳುವ ಸರ್ಕಾರ ನ್ಯಾಯ ಕೊಡಿಸುವ ಬದಲಾಗಿ ನೀರು ಬಿಡುವುದನ್ನು ಕಾಯಕ ಮಾಡಿಕೊಂಡಿದೆ, ಬರ ಪರಿಸ್ಥಿತಿ ತಲೆದೋರಿದೆ, ಜಲಾಶಯಗಳು ಬರಿದಾಗಿವೆ. ರೈತರ ಬೆಳೆ ನೀರಿಲ್ಲದೆ ಒಣಗುತ್ತಿವೆ, ಹೊಸ ಬೆಳೆ ನಾಟಿ ಮಾಡಲು ನೀರಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ನಿಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಪರಿಸ್ಥಿತಿ ತಂದೊಡ್ಡಿದೆ ಎಂದು ಹೇಳಿದರು. ಈ ವೇಳೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಉಮಾ ಶಂಕರ್, ಯೋಗೇಶ್ ಗೌಡ, ಅಜಯ್, ಗೌಡಗೆರೆ ಧನಂಜಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ABOUT THE AUTHOR

...view details