ಮಂಡ್ಯ: ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ತಮ್ಮ ಮನೆ ಮುಂದೆ ಚರಂಡಿ ನಿರ್ಮಾಣ ಮಾಡಲು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದು, ಸೂಕ್ತ ಸ್ಪಂದನೆ ದೊರೆತಿದೆ. ಪ್ರಧಾನಿ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ಬಂದಿದ್ದು, ಚರಂಡಿ ಕಾಮಗಾರಿ ನಡೆದಿದೆ. ಈ ವ್ಯಕ್ತಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿರುವ ಮಂಡ್ಯ ತಾಲೂಕಿನ ಹಳೇಬೂದನೂರು ಗ್ರಾಮದ ನಿವಾಸಿ ಬಿಎಸ್ ಚಂದ್ರಶೇಖರ್ ಎಂಬುವರು ತಮ್ಮ ಮನೆಯ ಮುಂದೆ ಚರಂಡಿ ನಿರ್ಮಾಣಕ್ಕೆ ಕಳೆದ ಐದು ವರ್ಷಗಳಿಂದ ಪರದಾಟ ನಡೆಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ ಅವರು ಚರಂಡಿ ನಿರ್ಮಾಣಕ್ಕಾಗಿ ಪಿಎಂ ಕಚೇರಿಗೆ ಪತ್ರ ಬರೆದಿದ್ದು, ಪಿಎಂ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಬಂದು ಎರಡೇ ದಿನಗಳಲ್ಲಿ ಚರಂಡಿ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಚಂದ್ರಶೇಖರ್, ಕೋವಿಡ್ ನಂತರ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮನೆ ಮುಂದೆ ಚರಂಡಿ ನಿರ್ಮಿಸಿ, ಶುಚಿತ್ವ ಕಾಪಾಡಬೇಕು ಎಂದು ಬೂದನೂರು ಗ್ರಾಮಪಂಚಾಯತಿ ಪಿಡಿಒಗೆ ಮನವಿ ಮಾಡಿದ್ದರು. ಬಳಿಕ ಕಾಮಗಾರಿ ಮಾಡಲು ಗ್ರಾಮ ಸಭೆಯಲ್ಲಿ ನಿರ್ಣಯ ಕೂಡ ಆಗಿತ್ತು. ಆದರೆ ಸ್ಥಳೀಯ ರಾಜಕೀಯ ಕಾರಣಕ್ಕೆ ಕಾಮಗಾರಿ ಆರಂಭವಾಗಿರಲಿಲ್ಲ. ಈ ಬಗ್ಗೆ ಚಂದ್ರಶೇಖರ್ ಅವರು ಮಂಡ್ಯ ಜಿಲ್ಲಾ ಪಂಚಾಯತ್ ಕುಂದುಕೊರತೆ ಪ್ರಾಧಿಕಾರಕ್ಕೆ ಕೂಡ ದೂರು ನೀಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲವಂತೆ.