ಮಂಡ್ಯ: ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಕೆಟ್ಟ ಬಿಜೆಪಿ ಸರ್ಕಾರ ನಮ್ಮ ದೇಶದಲ್ಲಿ ಇರಬೇಕಾ..? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಸಿದ್ದರಾಮಯ್ಯ ಭಾಷಣ ಮಂಡ್ಯದಲ್ಲಿ ಉಚಿತ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿದ್ರು. ನರೇಂದ್ರ ಮೋದಿ ಸುಳ್ಳು ಹೇಳೋದನ್ನ ನೋಡಿಕೊಂಡು ಯಡಿಯೂರಪ್ಪ ಸಹ ಸುಳ್ಳು ಹೇಳುವುದು ಕಲ್ತಿದ್ದಾರೆ ಎಂದು ಆರೋಪಿಸಿದ್ರು .ಮೋದಿ'ಅಚ್ಚೇ ದಿನ್ ಆಯೇಗಾ' ಅಂತಾ ಹೇಳಿದ್ದೇ ಹೇಳಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕತೆ ಅಧೋಗತಿ ಆಗೋಯ್ತು. ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಹೀಗಾದ್ರೇ ಜನರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ರು.
ಜೆಡಿಎಸ್ನವರು ಇದು ಇಲ್ಲ, ಅದು ಇಲ್ಲ ಎಂದು ಹೋಗುತ್ತಾರೆ. ಅವರನ್ನೇ ಸಿಎಂ ಮಾಡಿದ್ರೂ, ಸರ್ಕಾರ ಕೊಟ್ರು ಉಳಿಸಿಕೊಂಡಿಲ್ಲ ಎಂದು ಪ್ರಾದೇಶಿಕ ಪಕ್ಷದವರ ಕಾಲೆಳೆದರು.
ಆಪರೇಷನ್ ಕಮಲ ಆಗಿದ್ದು ಯಡಿಯೂರಪ್ಪನಿಂದ
ಯಡಿಯೂರಪ್ಪಗೆ ಮುಂಬಾಗಿಲಿಂದ ಬರೋದು ಗೊತ್ತಿಲ್ಲ, ಯಾವಾಗಲೂ ಹಿಂಬಾಗಿಲಿನಿಂದ ಬರ್ತಾರೆ. ಹೀಗಾಗಿ ಕಳೆದ ಬಾರಿಯೂ ಆಪರೇಷನ್ ಕಮಲ ಮಾಡಿದ್ರು. ಈ ಬಾರಿಯೂ ಅಪರೇಷನ್ ಕಮಲ ಮಾಡಿದ್ರು ಎಂದು ಬಿಎಸ್‌ವೈ ವಿರುದ್ಧ ಗುಡುಗಿದ್ರು. ಈ ಆಪರೇಷನ್ ಕಮಲ ಆರಂಭವಾಗಿದ್ದೇ ಯಡಿಯೂರಪ್ಪನಿಂದ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿ-ಜೆಡಿಎಸ್ ಬಡವರ ಪರ ಇಲ್ಲ. ಆದ್ರೆ ಕಾಂಗ್ರೆಸ್ ಬಡವರ ಪರ ಇರುವ ಸರ್ಕಾರ ಎಂದು ಹೇಳಿದ್ರು. ನಾವು ಎಲ್ಲಾ ಜಾತಿಯವರನ್ನ ಒಟ್ಟಿಗೆ ಕರೆದುಕೊಂಡು ಹೋಗ್ತೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದರ ಮೂಲಕ ಬಡವರ ಪರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7 KG ಅಕ್ಕಿ:
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 7 KG ಅಕ್ಕಿ ನೀಡುತ್ತೇವೆ ಎಂದು ಹೇಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಡವರ ಕಷ್ಟ ಯಡಿಯೂರಪ್ಪಗೆ ಗೊತ್ತಾಗ್ತಿಲ್ಲ ಎಂದ್ರು. ಕೊರೊನಾ ಕಾಲದಲ್ಲಿ 7 ಕೆಜಿ ಅಲ್ಲಾ 10 ಕೆಜಿ ಕೊಡಬೇಕು. ಆದ್ರೆ ಆತ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದ್ದಾರೆ ಬಿಎಸ್‌ವೈ ಎಂದರು. ಈ ವೇಳೆ ನಾವೇ ಅಧಿಕಾರದಲ್ಲಿದ್ರೇ ಪ್ರತಿಯೊಬ್ಬರಿಗೂ 10 KG ಅಕ್ಕಿ ಕೊಡ್ತಿದ್ದೆ ಅಂದ್ರು.
ಪ್ರತಿಯೊಬ್ಬರಿಗೂ 10 ಸಾವಿರ ಹಾಗೂ 10 KG ಅಕ್ಕಿ ಕೊಡಿ ಅಂತಾ ಯಡಿಯೂರಪ್ಪಗೆ ಹೇಳಿದೆ. ಕೊಟ್ಟಿದ್ರೆ ಇವರ ಅಪ್ಪನ ಮನೆ ಗಂಟು ಹೋಗ್ತಿತ್ತಾ..?, ಯಾರ ಮನೆಯಿಂದ ಕೊಡ್ತಿದ್ರು, ಸರ್ಕಾರದ ದುಡ್ಡು ತಾನೇ ಅಂದ್ರು. ಯಡಿಯೂರಪ್ಪ ಮಂಡ್ಯದವರು, ಆದ್ರೂ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಗೆ ಒಂದು ರೂಪಾಯಿ ಕೊಟ್ಟಿಲ್ಲ
ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದಾರೆ ಯಡಿಯೂರಪ್ಪ..?. ಮಂಡ್ಯ ಜಿಲ್ಲೆಗೆ ಸರ್ಕಾರದಿಂದ ಒಂದು ರೂಪಾಯಿ ಕೊಟ್ಟಿಲ್ಲ. ಯಾಕೆ ಅಧಿಕಾರಕ್ಕೆ ಬರ್ತಿರಾ ನೀವೆಲ್ಲಾ..? ಕೋಟ್ಯಂತರ ರೂಪಾಯಿ ಹಣ ಕೊಟ್ಟು MLAಗಳನ್ನ ಕೊಂಡುಕೊಂಡು ಇದಕ್ಕೆ ಬರಬೇಕಿತ್ತಾ?. ಇವರು ಆಡಳಿತ ನಡೆಸುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಂಡ್ಯದಲ್ಲಿ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.